

ಮೈಸೂರು: ಕಸ್ತೂರಿರಂಗನ್ ವರದಿ ಸಂಬಂಧ ನಮ್ಮ ಸರ್ಕಾರ ಪರಿಸರ ಪರ ಇದ್ದು, ಕಾಫಿ ಬೆಳೆಗಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಿದೆ ಎಂದು ಎಂದು ಶಾಸಕ ಮಂತರ್ ಗೌಡ ಹೇಳಿದರು.
ಕರ್ನಾಟಕ ಗ್ರೋವರ್ಸ್ ಫೆಡರೇಷನ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಮೈಸೂರು ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಂಗಳವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸರ್ಕಾರ ಯಾವಾಗಲೂ ರೈತರು, ಬೆಳೆಗಾರರ ಪರ ಇರುತ್ತದೆ. ಕಾಫಿ ಬೆಳೆಗಾರರು ಕೂಡ ಪರಿಸರದ ಪರ ಇದ್ದಾರೆ. ಹಸಿರೀಕರಣಕ್ಕೂ ಹೆಚ್ಚು ಒತ್ತು ನೀಡಿದ್ದಾರೆ ಎಂದರು.
ಕಾಫಿ ಕೃಷಿ ಎನ್ನುವುದು ಭಾರ ಅಲ್ಲ. ಸಂಬಳಕ್ಕೆ ಜೋತು ಬೀಳದೆ ಕೃಷಿಯತ್ತ ಯುವಜನರು ಆಸಕ್ತಿ ತೋರಬೇಕು. ಖಂಡಿತ ಇದರಲ್ಲಿ ಲಾಭ ಇದೆ. ಕಾಫಿ ಕೃಷಿಯಲ್ಲಿ ಈಗ ಕೃಷಿ ಕಾರ್ಮಿಕರು, ಗೊಬ್ಬರ ಬೆಲೆ ಏರಿಕೆ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳಿವೆ. ಮಾರುಕಟ್ಟೆಯ ಸವಾಲು ಇದೆ. ಈ ಎಲ್ಲ ಸವಾಲುಗಳಿಗೆ ಉತ್ತರವಾಗಿ ಕಾಫಿ ಕೃಷಿಯಲ್ಲಿ ಯಂತ್ರಗಳ ಬಳಕೆ ಸೇರಿದಂತೆ ಕಾಫಿ ತಳಿಗಳ ಆಯ್ಕೆಯಲ್ಲಿ ಜಾಣ್ಮೆ ತೋರಬೇಕಿದೆ. ಈ ಸಂಬಂಧ ಕಾಫಿ ಬೋರ್ಡ್‌ನಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ ಎಂದರು.
ಕಾಫಿ ಬೆಳೆಗಾರರು ಮತ್ತು ಬೆಳೆಗಾರರ ಸಂಘಗಳು ಒಗ್ಗಟ್ಟು ಪ್ರದರ್ಶಿಸಬೇಕು. ಆಗ ನಿಮ್ಮ ಪರ ರಾಜಕಾರಣಿಗಳು ನಿಲ್ಲುತ್ತಾರೆ. ನಿಮ್ಮ ಸಮಸ್ಯೆಗಳಿಗೂ ಪರಿಹಾರ ನೀಡುತ್ತಾರೆ. ಬೇಡಿಕೆಗಳನ್ನು ಈಡೇರಿಸುತ್ತಾರೆ. ದಸರಾ ಅಂಗವಾಗಿ ಮಡಿಕೇರಿಯಲ್ಲಿ ಅ.6,7 ರಂದು ಕಾಫಿ ಬೆಳೆಗಾರರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೈಸೂರು ಅರಮನೆಗೂ, ಕಾಫಿ ಬೆಳೆಗಾರರಿಗೂ ಸಂಬಂಧ ಇದೆ. ಮೈಸೂರು ಅರಸರು ಅರಸೊತ್ತಿಗೆಯನ್ನು ಲೋಕಕಲ್ಯಾಣಕ್ಕೆ ಬಳಸಿದರು. ಅವರ ಇಡೀ ಪರಂಪರೆ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅನುಕೂಲ ಕಲ್ಪಿಸಿದ್ದಾರೆ. ಅದರ ಫಲ ಕಾಫಿ ಬೆಳೆಗಾರರಿಗೂ ಸಿಕ್ಕಿದೆ ಎಂದರು.
ನಮ್ಮ ಭಾಗದಲ್ಲಿ ಕಾಫಿ ಬೆಳೆಗಾರರು ಎಂದರೆ ಶ್ರೀಮಂತರು. ಯಾವಾಗಲೂ ಖುಷಿಯಾಗಿರುತ್ತಾರೆ ಎಂದು ತಿಳಿದಿದ್ದೇವೆ. ಸಣ್ಣಪುಟ್ಟ ಸಮಸ್ಯೆ ಇರಬಹುದು. ಬೆಲೆಯ ಏರಿಳಿತ ಸಹಜ. ವಿಮುಖರಾಗದೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಫಿ ಸೇವನೆ ಆರೋಗ್ಯಕ್ಕೆ ಪೂರಕ. ಯಾವುದೇ ಮನೆಗೆ ಹೋದರು ಕಾಫಿ ನೀಡುತ್ತಾರೆ. ಕಾಫಿ ಡೇ, ಸ್ಟಾರ್ ಬಡ್ಸ್‌ನಂತಹ ಕಂಪನಿಗಳು ಜಾಗತಿಕ ಮನ್ನಣೆ ಪಡೆದಿವೆ. ಕಾಫಿ ಪ್ರಯೋಜನಗಳ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಹಾಲು, ಸಕ್ಕರೆ ಇಲ್ಲದ ಕಾಫಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ ಎಂದು ಇತ್ತೀಚಿನ ಸಂಶೋಧನಾ ವರದಿ ಹೇಳುತ್ತದೆ. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂತಹ ಸಂಶೋಧನೆಗಳು ಹೆಚ್ಚು ನಡೆಯಬೇಕು ಎಂದರು.
ನಮ್ಮ ಕಾಫಿ ಬೆಳೆಗಾರರು ಮನಸ್ಸು ಮಾಡಿದರೆ ಭಾರತವನ್ನು ವಿಶ್ವದಲ್ಲೇ ಕಾಫಿ ರಫ್ತು ಮಾಡುವುದರಲ್ಲಿ ನಂ.1 ಮಾಡಬಹುದು. ಈಗ ನಮ್ಮ ದೇಶ ಕಾಫಿ ರಫ್ತು ಮಾಡುವುದರಲ್ಲಿ 6ನೇ ಸ್ಥಾನದಲ್ಲಿ. ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು ಕಾಫಿ ಬೆಳೆಯಲಾಗುತ್ತದೆ ಎಂದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ.ಸುರೇಂದ್ರ ಮಾತನಾಡಿ, ಕಾಫಿಗೆ ಒಂದು ಸಂಸ್ಕೃತಿ, ಪರಂಪರೆ, ಸಂವೇದನೆ ಇದೆ. ಕಾಫಿ ಎನ್ನುವುದು ಬೆಂಜ್ ಕಾರು ಇದ್ದಂತೆ. ಅದಕ್ಕೊಂದು ಗೌರವ ಇದೆ. ಆಹ್ಲಾದಕರ ವಾತಾವರಣದಲ್ಲಿ ಅದನ್ನು ಸೇವಿಸಿದರಷ್ಟೇ ರುಚಿ ಸಿಗುತ್ತದೆ. ನಮ್ಮದು ನೆರಳಿನ ಆಶ್ರಯದಲ್ಲಿ ಬೆಳೆಯುವ ಕಾಫಿ. ದೇಶದಲ್ಲಿನ ಶೇ.70 ರಷ್ಟು ಕಾಫಿಯನ್ನು ಕರ್ನಾಟಕದಕ್ಕು ಬೆಳೆಯುತ್ತೇವೆ. 17ನೇ ಶತಮಾನದ ಆದಿ ಭಾಗದಲ್ಲಿ ಶ್ರೀರಂಗಪಟ್ಟಣ, ಬೆಂಗಳೂರಿನಲ್ಲಿ ಕಾಫಿ ಮಾರಾಟ ನಡೆದಿತ್ತು. ಮೈಸೂರು ಅರಸರು ಕೂಡ ಕಾಫಿ ಬೆಳೆಗಾರರಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
2047ಕ್ಕೆ ನಮ್ಮ ಕಾಫಿ ಉತ್ಪಾದನೆ 3 ಲಕ್ಷ ಟನ್‌ನಿಂದ 9 ಲಕ್ಷ ಟನ್‌ಗೆ ತಲುಪಬೇಕು. ಭಾರತದ ಕಾಫಿ, ಕರ್ನಾಟಕ ಕಾಫಿ ಎನ್ನುವುದು ಒಂದು ಬ್ರಾೃಂಡ್ ಆಗಬೇಕು. ನಮ್ಮ ಕೊಡುಗೆಗೆ ಹೋಲಿಸಿದರೆ ಬೆಳೆಗಾರರಿಗೆ ಸಿಗುವ ಅನುದಾನ ಕಡಿಮೆ ಇದೆ. ನಮಗೆ ಸಲ್ಲಬೇಕಾದ ಸವಲತ್ತುಗಳು ಕಾಫಿ ಮಂಡಳಿ ಇಲ್ಲವೆ ಇಲಾಖೆ ಮೂಲಕ ಸಿಗಬೇಕು. ವಿಭಿನ್ನ ಕಾಫಿ ಬೆಳೆಗೆ ನಾವು ಆದ್ಯತೆ ನೀಡಬೇಕು. 15 ಲಕ್ಷ ಜನರಿಗೆ ನೌಕರಿ, ಕೇಂದ್ರಕ್ಕೆ 13 ಸಾವಿರ ಕೋಟಿ ರೂ. ಆದಾಯವನ್ನು ಪಶ್ಚಿಮ ಘಟ್ಟದ ಕಾಫಿ ಕೃಷಿ ತಂದು ಕೊಟ್ಟಿದೆ ಎಂದು ಟಿ.ಪಿ.ಸುರೇಂದ್ರ ಮಾಹಿತಿ ನೀಡಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾಅಮರನಾಥ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಶಾಸಕ ಎಸ್.ಮಂಜುನಾಥ್, ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಡಾ.ಎಚ್.ಟಿ.ಮೋಹನ್‌ಕುಮಾರ್, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಸದಸ್ಯ ಎನ್.ಬಿ.ಉದಯ್‌ಕುಮಾರ್, ಜಿ.ಕೆ.ಕುಮಾರ್ ಇತರರಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಲಾಯಿತು. ವಿವಿಧ ಕಾಫಿಗಳ ಪ್ರದರ್ಶನವೂ ನಡೆಯಿತು. ಇದೇ ವೇಳೆ ಕಾಫಿ ಬೆಳೆಗಾರರು ತಮ್ಮ ಸಾಂಪ್ರದಾಯಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.