ಜಾಗತಿಕ ತಾಪಮಾನದಿಂದ ಹವಾಮಾನ ವೈಪರೀತ್ಯ: ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

International Climate Action Day Mandya
Published on

ಮಂಡ್ಯ: ಪ್ರಸ್ತುತ ಜಾಗತಿಕ ತಾಪಮಾನ ಹೆಚ್ಚಳವೇ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಕೆಇಬಿ ಬಡಾವಣೆಯಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹವಾಮಾನ ಕ್ರಿಯೆ ದಿನಾಚರಣೆ ಮತ್ತು ಹವಾಮಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಈಗಾಗಲೇ ಜನರು ಅನುಭವಿಸುತ್ತಿದ್ದಾರೆ. ಜಗತ್ತಿನಲ್ಲಿ ಪ್ರಕೃತಿ ವಿಕೋಪಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನು ವಿಶ್ವಸಂಸ್ಥೆ ವರದಿ ಮಾಡಿದೆ ಎಂದು ತಿಳಿಸಿದರು.

ಕಳೆದ 20 ವರ್ಷದಲ್ಲಿ ಅತಿ ಹೆಚ್ಚು ಪ್ರಕೃತಿಯ ವಿಕೋಪಗಳು ಸಂಭವಿಸಿದ 3ನೇ ದೇಶ ಭಾರತ. 1995ರಿಂದ ಈವರೆಗೆ ಭಾರತದಲ್ಲಿ 1,058 ಪ್ರಕೃತಿ ವಿಕೋಪ ಘಟನೆಗಳು ಉಂಟಾಗಿವೆ ಎಂದು ವಿಪತ್ತು ನಿರ್ವಹಣಾ ರಾಷ್ಟ್ರೀಯ ಸಂಸ್ಥೆ ಹೇಳಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಉಂಟಾಗಲಿರುವ ಹವಾಮಾನ ವೈಪರಿತ್ಯ ಬಗ್ಗೆ ಈಗಾಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಹವಾಮಾನ ಬದಲಾವಣೆಯನ್ನು ಸರಿಪಡಿಸಲು 196 ದೇಶ ಪ್ಯಾರಿಸ್ ಒಪ್ಪಂದವನ್ನು 2015 ಡಿ.12ರಂದು ಮಾಡಿಕೊಂಡಿವೆ. ಅದರಂತೆ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮಾಡಲು ಒಪ್ಪಿಕೊಂಡಿವೆ ಎಂದು ತಿಳಿಸಿದರು.

ಈಗಾಗಲೇ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಕಾರ್ಬನ್ ಡೈ ಆಕ್ಸೈಡ್, ಹೊರಸೂಸುವಿಕೆ ಮತ್ತು ಆಹಾರ ಪೋಲಾಗುವುದರಿಂದ ಮಿಥೇನ್ ಗ್ಯಾಸ್ ಹೆಚ್ಚುತ್ತಿದೆ. ಇನ್ನೊಂದೆಡೆ ಪ್ರಕೃತಿಯ ಮೇಲೆ ಮಾನವನ ಚಟುವಟಿಕೆಗಳ ಪ್ರಭಾವ ಹೆಚ್ಚಾಗಿದೆ. ಇದೆಲ್ಲವೂ ಹವಾಮಾನ ವೈಪರೀತ್ಯಕ್ಕೆ ಕಾರಣ. ಆಯಾ ದೇಶಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದ ಅಂಶಗಳನ್ನು ಪರಿಗಣಿಸಬೇಕಿದೆ. ಹವಾಮಾನ ಬದಲಾವಣೆಯಿಂದ ವಿಪತ್ತುಗಳು ಹೆಚ್ಚು ಸಂಭವಿಸಲಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಗುಡುಗುಸಹಿತ ಮಳೆ ಪ್ರಮಾಣ, ಪ್ರವಾಹ ಹಾಗೂ ಪ್ರಕೃತಿವಿಕೋಪಗಳು ಹೆಚ್ಚಾಗಿವೆ. ವಿಷಕಾರಿ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಪ್ರಮಾಣವನ್ನು ತಗ್ಗಿಸಲು ಸರ್ಕಾರದ ಜತೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಅಲಯನ್ಸ್ ಸಂಸ್ಥೆಯ ಸಂಪುಟ ಕಾರ್ಯದರ್ಶಿ ಚಂದ್ರಶೇಖರ್, ಮಾಂಡವ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಕುಮಾರ್, ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಬಡಾವಣೆ ನಿವಾಸಿಗಳಾದ ಪ್ರಭಾವತಿ, ಮಲ್ಲೇಶ್, ಕಟ್ಟೆಕೃಷ್ಣಸ್ವಾಮಿ, ಮಾದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net