ಮಿಲನ್, ಭಾನುಪ್ರಸಾದ್‌ಗೆ ಅಂತಾರಾಷ್ಟ್ರೀಯ ರೇಟಿಂಗ್: ಅಕಾಡೆಮಿಯ ಜಂಟಿ ಕಾರ್ಯದರ್ಶಿ ಎನ್.ಮಾಧುರಿ ಜೈನ್ ಮಾಹಿತಿ

International Chess Organization published rating list mandya
Published on

ಮಂಡ್ಯ: ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ ಫೆ.1ರಂದು ಬಿಡುಗಡೆಗೊಳಿಸಿದ ರೇಟಿಂಗ್ ಪಟ್ಟಿಯಲ್ಲಿ ಮಂಡ್ಯ ಚೆಸ್ ಅಕಾಡೆಮಿ ವಿದ್ಯಾರ್ಥಿಗಳಾದ 12 ವರ್ಷದ ಎಸ್.ಮಿಲನ್‌ಗೌಡ ಕ್ಲಾಸಿಕಲ್ ರೇಟಿಂಗ್‌ನಲ್ಲಿ 1059 ಹಾಗೂ 11 ವರ್ಷದ ಎಂ.ಭಾನುಪ್ರಸಾದ್ ಮಿಂಚಿನ ರೇಟಿಂಗ್‌ನಲ್ಲಿ 1144ನೇ ಸ್ಥಾನ ಪಡೆದಿದ್ದಾರೆ ಎಂದು ಅಕಾಡೆಮಿ ಜಂಟಿ ಕಾರ್ಯದರ್ಶಿ ಎನ್.ಮಾಧುರಿ ಜೈನ್ ಹೇಳಿದರು.

ಬೆಂಗಳೂರಿನಲ್ಲಿ ಜ.22ರಂದು ಅಂತಾರಾಷ್ಟ್ರೀಯ ಮಿಂಚಿನ ಚೆಸ್ ಹಾಗೂ ಜ.23 ರಿಂದ 26ರವರೆಗೆ ನಡೆದ ಅಂತಾರಾಷ್ಟ್ರೀಯ ಗ್ರಾೃಂಡ್ ಮಾಸ್ಟರ್ ಟೂರ್ನಿಯಲ್ಲಿ ಇಬ್ಬರು ಗೆಲುವು ಸಾಧಿಸಿದ್ದಾರೆ. ಈ ಪಂದ್ಯಾವಳಿಗೆ ವಿವಿಧ ದೇಶಗಳಿಂದ ಸುಮಾರು 700 ಸ್ಪರ್ಧಿಗಳು ಆಗಮಿಸಿದ್ದರು. ಮಂಡ್ಯ ಚೆಸ್ ಅಕಾಡೆಮಿಯು ರಾಜ್ಯದಲ್ಲೇ ಅತಿ ಹೆಚ್ಚಿನ 88 ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರನ್ನು ಹೊಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕಾಡೆಮಿ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಚೆಸ್ ಕಲಿಯುವಂತೆ ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ 40 ಮಹಿಳೆಯರಿಗೆ ಬೇಸಿಕ್ ಚೆಸ್ ತರಬೇತಿ ನೀಡಿ ಅವರಿಂದ ಮಕ್ಕಳಿಗೆ ಕಲಿಸಲಾಗುತ್ತಿದೆ. ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ 50 ಹಾಗೂ ಖಾಸಗಿಯಲ್ಲಿ ಸುಮಾರು 2 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ. ಒಂದು ಮಗುವಿಗೆ ತಿಂಗಳಿಗೆ 40 ರೂಗಳನ್ನು ಶುಲ್ಕವಾಗಿ ಪಡೆಯಲಾಗುತ್ತಿದೆ. ಚೆಸ್ ಆಟ ಕಲಿಯುವುದರಿಂದ ಭವಿಷ್ಯದಲ್ಲಿ ಉತ್ತಮ ಆಟಗಾರರಾಗುವುದರ ಜತೆಗೆ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಆಟಗಾರರಿಗೆ ಉದ್ಯೋಗವಕಾಶದಲ್ಲಿ ಶೇ.5 ಕೃಪಾಂಕ ಸಿಗಲಿದೆ. ಆದಿ ಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಅವರು ರಾಜ್ಯಾದ್ಯಂತ 400 ಶಾಲೆಗಳಲ್ಲಿ ಮಕ್ಕಳಿಗೆ ಚೆಸ್ ಕಲಿಸುವುದಕ್ಕೆ ಆಸಕ್ತಿ ತೋರಿದ್ದಾರೆ. ಚೆಸ್ ಆಟದಲ್ಲಿ ಮಂಡ್ಯ ಜಿಲ್ಲೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಅದರಂತೆ ಅಂತಾರಾಷ್ಟ್ರೀಯ ಮಟ್ಟದ ಗ್ರಾೃಂಡ್ ಮಾಸ್ಟರ್ ಪಂದ್ಯಾವಳಿ ಆಯೋಜಿಸಬೇಕೆಂಬ ಕನಸಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರಾದ ಸ್.ಮಿಲನ್‌ಗೌಡ, ಎಂ.ಭಾನುಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net