

ಹುಬ್ಬಳ್ಳಿ : ಜಾಗತಿಕ ಬಿಪಿ ಸಂಸ್ಥೆ ಹಾಗೂ ಭಾರತೀಯ ಸಂಸ್ಥೆಯ ಅಡಿಯಲ್ಲಿ ಅಂತಾರಾಷ್ಟ್ರೀಯ ಬಿಪಿ ಸಮ್ಮೇಳನವು ಮಾ. 7, 8 ಹಾಗೂ 9ರಂದು ಚೆನೈನಲ್ಲಿ ಜರುಗಿತು.
ಬಿಪಿ ತಡೆಗಟ್ಟುವ ಕುರಿತು ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಭಾರತೀಯ ಬಿಪಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಹುಬ್ಬಳ್ಳಿಯ ತಜ್ಞ ವೈದ್ಯ ಡಾ. ಜಿ.ಬಿ. ಸತ್ತೂರ, ಜೀವನಶೈಲಿ ಮಾರ್ಪಾಡು ಮಾಡುವುದು, ಪೋಟ್ಯಾಶಿಯಂಯುಕ್ತ ಹಣ್ಣು, ಹಂಪಲಗಳನ್ನು ಹೆಚ್ಚು ಸೇವಿಸುವುದು, ನಿತ್ಯ ವ್ಯಾಯಾಮ ಮಾಡುವುದು, ಧೂಮಪಾನ ಹಾಗೂ ತಂಬಾಕು ಸೇವನೆ ಮಾಡದೇ ಇರುವುದು, ರಾತ್ರಿ 7 ರಿಂದ 9 ತಾಸು ನಿದ್ದೆ ಮಾಡುವುದು ಬಿಪಿಯನ್ನು ಬರದಂತೆ ತಡೆಯುವ ಉಪಾಯಗಳು ಎಂದು ತಿಳಿಸಿದರು.
ಆದರೂ, ಸಾಕಷ್ಟು ಜನರಲ್ಲಿ ವಯಸ್ಸು ಹೆಚ್ಚಿದಂತೆ ಏರುವ ಬಿಪಿಯನ್ನು ಮುಂದೂಡುವುದು ಅಥವಾ ನಿಯಂತ್ರಿಸುವುದು ಸಾಧ್ಯ. ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು ಇತ್ತೀಚೆಗೆ ಪ್ರಾಮುಖ್ಯತೆ ಪಡೆಯುತ್ತಿದೆ. ನಿತ್ಯ ಪ್ರತಿಯೊಬ್ಬ ಮನುಷ್ಯ 1.2 ಚಮಚೆಗಿಂತ (5ಎಂಎಲ್ ಚಮಚೆ)ಗಿಂತ ಹೆಚ್ಚಿನ ಉಪು್ಪ ಸೇವಿಸಬಾರದು ಎಂದು ಹೇಳಿದರು.
ಭಾರತೀಯರಲ್ಲಿ ಹಪ್ಪಳ, ಉಪ್ಪಿನಕಾಯಿ, ಮೇಲಿನ ಉಪ್ಪಿನ ಸೇವನೆ ಸರ್ವೆ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕೂಡ ಕಂಡುಬರುವ ಅಧಿಕ ರಕ್ತದೊತ್ತಡವು ಆನುವಂಶಿಕವಾಗಿದೆ. ಬಿಪಿಯು ‘ಮೌನ ಹಂತಕ’ ಎಂದೇ ಪ್ರಸಿದ್ಧವಾಗಿದ್ದು, ಮೇಲಿಂದ ಮೇಲೆ ತಪಾಸಣೆ ಮಾಡಿಸುವುದರಿಂದ ಮಾತ್ರ ಗೊತ್ತಾಗುವುದು. ಅನಿಯಂತ್ರಿತ ರಕ್ತದೊತ್ತಡವು ಮೆದುಳಿನಲ್ಲಿ ರಕ್ತಸ್ರಾವ, ಹೃದಯಾಘಾತ ಹಾಗೂ ಮೂತ್ರಪಿಂಡದ ಹಾನಿ ಮಾಡುವುದು ಎಂದು ತಿಳಿಸಿದರು.
800 ಕ್ಕೂ ಹೆಚ್ಚು ತಜ್ಞ ವೈದ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 150ಕ್ಕೂ ಹೆಚ್ಚು ವಿದೇಶಿ ಬಿಪಿ ತಜ್ಞರು ಪಾಲ್ಗೊಂಡಿದ್ದರು.