

ಮಂಡ್ಯ: ಜೈವಿಕ ಇಂಧನ ಬಳಕೆಯಿಂದ ಪ್ರಕೃತಿ ಅಸಮತೋಲನವನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ತಾಲೂಕಿನ ವಿ.ಸಿ ಫಾರ್ಮ್‌ನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹಿಪ್ಪೆ, ಹೊಂಗೆ, ಬೇವಿನ ಎಣ್ಣೆಯನ್ನು ದಿನನಿತ್ಯ ಉಪಯೋಗಿಸುತ್ತಿದ್ದರು. ಅದರ ಮೂಲಕ ಆದಾಯೋತ್ಪನ್ನ ಚಟುವಟಿಕೆ ನಡೆಸುತ್ತಿದ್ದರು. ಇಂದು ಪ್ರಕೃತಿಯಲ್ಲಿ ಅಸಮತೋಲನ ಕಾಣುತ್ತಿದೆ. ಇದಕ್ಕೆ ರೈತರು ಜಮೀನುಗಳಲ್ಲಿ ಜೀವ ಸಂಕುಲವಾಗಿರುವ ಸಸ್ಯಗಳನ್ನು ಬೆಳೆಸದೆ ಜೀವನೋಪಾಯಕ್ಕಾಗಿ ಆರ್ಥಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹೇಳಿದರು.
ಜೈವಿಕ ಇಂಧನ ಬಳಕೆಯಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತಡೆಗಟ್ಟಿ ಉತ್ತಮ ಪರಿಸರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿನ ಅಸಮತೋಲನದ ಕಾರಣಕ್ಕೆ ಯಥೇಚ್ಚ ವಾಹನಗಳ ದಟ್ಟಣೆಯಿಂದಾಗಿ ಅಸಮತೋಲನವನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಗುಡ್ಡ ಕುಸಿತಗಳು ಪ್ರಮುಖ ಕಾರಣವಾಗಿದೆ. ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಯಥೇಚ್ಚ ಔಷಧ ಗಿಡಮೂಲಿಕೆಗಳನ್ನು ಕಾಣಬಹುದಾಗಿತ್ತು. ಅಪರೂಪದ ಸಸ್ಯ ಪ್ರಬೇಧಗಳು ಮನುಷ್ಯನ ರೋಗ ರುಜಿನಗಳ ನಿವಾರಣೆಗೆ ಸಾಧ್ಯವಾಗುತ್ತಿದ್ದವು. ಆದರೆ ಈಗ ಎಲ್ಲರೂ ವಿಜ್ಞಾನದ ವೈದ್ಯಕೀಯ ಕ್ಷೇತ್ರಕ್ಕೆ ಹೋಗುತ್ತಿದ್ದೇವೆ. ವಿದ್ಯಾರ್ಥಿನಿಯರಲ್ಲಿ ಅತಿ ಹೆಚ್ಚು ನೆರೆ ಕೂದಲು ಬರುತ್ತಿದ್ದು, ಇದನ್ನು ತಪ್ಪಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾಧಿಕಾರಿ ಡಾ.ಶಿವಕುಮಾರ್ ಮತ್ತು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿದರು. ಕೃಷಿ ಮಹಾವಿದ್ಯಾಲಯದ ಡೀನ್ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಪ್ರವೀಣ್, ಉಪ ಪರಿಸರ ಅಧಿಕಾರಿಗಳಾದ ಭವ್ಯಾ, ಅಶ್ವಿನಿ ಹಾಜರಿದ್ದರು. ಕಲಾವಿದ ಬಸವರಾಜು ಸಂತೆಕಸಲಗೆರೆ ಪರಿಸರ ಗೀತೆಗಳನ್ನು ಸಾದರಪಡಿಸಿದರು. ಮಳವಳ್ಳಿ ತಾಲೂಕು ದಾಸನದೊಡ್ಡಿಯ ಕುಂದೂರು ಬೆಟ್ಟದಲ್ಲಿ ನಿರ್ಮಿಸಿರುವ ಕೆರೆ ಕಟ್ಟೆಗಳನ್ನು ಸಂರಕ್ಷಣೆಗೆ ಜೈವಿಕ ಇಂಧನ ಗಿಡಗಳನ್ನು ಬೆಳೆಸಲು ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು.