

ಮಂಡ್ಯ: ಪಳೆಯುಳಿಕೆ ಇಂಧನವನ್ನು ಕಡಿಮೆ ಮಾಡಿ, ಜೈವಿಕ ಇಂಧನವನ್ನು ಜನತೆ ಹೆಚ್ಚಾಗಿ ಬಳಸಬೇಕು ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎ.ಎ.ಅಣ್ಣಯ್ಯ ತಿಳಿಸಿದರು.
ತಾಲೂಕಿನ ಆನಸೋಸಲು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಅರಣ್ಯ ಇಲಾಖೆ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಡಿಆರ್‌ಪಿಬಿ ಫೌಂಡೇಷನ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನದ ಅಂಗವಾಗಿ ಆಯೋಜಿಸಿದ್ದ ಸಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ತ್ಯಾಜ್ಯಗಳ ಹುದಕುವಿಕೆಯಿಂದ ಎಥೆನಾಲ್ ಮತ್ತು ಮೆಥೊನಾಲ್ನಂತಹ ಆಲ್ಕೋಹಾಲ್ ಇಂಧನ ಪಡೆಯಲಾಗುತ್ತದೆ. ತಾಳೆ, ಸೂರ್ಯಕಾಂತಿ ಮತ್ತು ಇತರೆ ಸಸ್ಯಗಳಿಂದ ತೆಗೆಯಲಾದ ಎಣ್ಣೆಗಳಿಂದ ಡೀಸೆಲ್ ತಯಾರಿಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಬಳಸುವ ಜೈವಿಕ ಇಂಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಜೈವಿಕ ಸಸ್ಯಗಳನ್ನು ಬೆಳೆಸುವುದರಿಂದ ಪ್ರಕೃತಿಯಲ್ಲಿ ಅಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ. ಜೈವಿಕ ಸಸ್ಯಗಳಲ್ಲಿ ಔಷಧ ಗುಣ ಕಾಣಬಹುದಾಗಿದೆ. ಜೈವಿಕ ಸಸ್ಯ ಪ್ರಭೇದಗಳಿಂದ ಜೀವ ವೈವಿಧ್ಯತೆ ಹೆಚ್ಚಳವಾಗುತ್ತದೆ. ನಮ್ಮ ಹಿರಿಯರು ಹಳ್ಳಿಗಳಲ್ಲಿ ನೆಡುತೋಪು, ಕೆರೆ ಕಟ್ಟೆ ನಿರ್ಮಿಸುತ್ತಿದ್ದರು. ಆ ಮೂಲಕ ಗ್ರಾಮ ಪರಿಸರ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಆಧುನಿಕ ಆಹಾರ ಶೈಲಿಯಿಂದಾಗಿ ಯುವ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಉಪ ಕಸುಬುಗಳಾಗಿ ಕೈತೋಟ, ಕೀರೆಮಡಿಯನ್ನು ಗ್ರಾಮೀಣ ಮಹಿಳೆಯರು ಶ್ರಮ ವಿಭಜನೆಯ ಮೂಲಕ ಮಾಡಿಕೊಳ್ಳುತ್ತಿದ್ದರು. ಆ ಮೂಲಕ ಕುಟುಂಬಕ್ಕೆ ಅವಶ್ಯಕವಿರುವ ಸಸ್ಯ ತರಕಾರಿಯನ್ನು ರಾಸಾಯನಿಕ ಮುಕ್ತವಾಗಿ ಬೆಳೆಸುತ್ತಿದ್ದರು. ಅದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಿದ್ದರು. ಜೈವಿಕ ಇಂಧನವನ್ನು ಸಮೂಹ ವಾಹನಗಳಲ್ಲಿ ಬಳಸುವುದರಿಂದ ಪ್ರಕೃತಿಯ ಅಸಮತೋಲನ ತಡೆಗಟ್ಟಬಹುದಾಗಿದೆ. ವಾಯುಮಾಲಿನ್ಯ ತಡೆಗಟ್ಟಲು ಜೈವಿಕ ಇಂಧನ ಪೂರಕವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಜಿಲ್ಲಾ ಸೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಆರ್.ಮನೋಹರ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಪ್ರವೀಣ್, ಉಪವಲಯ ಅರಣ್ಯ ಅಧಿಕಾರಿ ಜನಾರ್ದನ್, ವನ ಪಾಲಕರಾದ ಲೋಕೇಶ್, ಕುಮಾರ್ ಉಪಸ್ಥಿತರಿದ್ದರು.
ಇದೇ ವೇಳೆ ಚಿಕ್ಕಬಳ್ಳಿ-ಆನಸೋಸಲು ಗ್ರಾಮದ ಸರ್ಕಾರಿ ಶಾಲೆ ಅವರಣ, ನಾಲೆ ಬದು, ದೇವಸ್ಥಾನದ ಆವರಣದಲ್ಲಿ ಜೈವಿಕ ಇಂಧನಗಳ ಗಿಡ ನೆಡಲಾಯಿತು. ಪರಿಸರ ನಡಿಗೆಯ ಮೂಲಕ ವಿಷಯ ತಜ್ಞರಾಗಿ ಡಾ.ಎ.ಎಂ.ಅಣ್ಣಯ್ಯ ಪ್ರಾತ್ಯಕ್ಷಿತವಾಗಿ ಜೈವಿಕ ಇಂಧನ ಗಿಡ ಪರಿಚಯಿಸಿದರು.