ಪತಂಜಲಿಯಿಂದ ಅಂತಾರಾಷ್ಟ್ರೀಯ ಅಗ್ನಿಹೋತ್ರ ದಿನ

New Patanjali New
Published on

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ, ಕರ್ನಾಟಕ ಮತ್ತು ಪತಂಜಲಿ ವೆಲ್ನೆಸ್ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮುಕುಂದ ನಗರದ ಪತಂಜಲಿ ವೆಲ್ನೆಸ್​ನಲ್ಲಿ ಅಂತಾರಾಷ್ಟ್ರೀಯ ಅಗ್ನಿಹೋತ್ರ ದಿನವನ್ನು ಬುಧವಾರ ಆಚರಿಸಲಾಯಿತು.

ವಿಶೇಷ ಅಗ್ನಿಹೋತ್ರ ಅಭ್ಯಾಸದ ಮಾರ್ಗದರ್ಶನ ಮಾಡಿ ಮಾತನಾಡಿದ ಪತಂಜಲಿ ಯೋಗ ಪೀಠ ಕರ್ನಾಟಕದ ಪ್ರಭಾರಿ ಭವರಲಾಲ್ ಆರ್ಯ, ಹತ್ತಾರು ವರ್ಷಗಳ ಹಿಂದೆ ಯೋಗ ಜನಸಾಮಾನ್ಯರಿಂದ ದೂರ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಜಗತ್ತು ಯೋಗ ಅಭ್ಯಾಸ ಮಾಡುತ್ತಿದೆ ಎಂದರು.

ಅಗ್ನಿಹೋತ್ರವನ್ನೂ ಜನಸಾಮಾನ್ಯರೂ ಅಭ್ಯಾಸ ಮಾಡಿ ಆಧ್ಯಾತ್ಮಿಕ ಲಾಭದೊಂದಿಗೆ ಉತ್ತಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಹೊಂದಬಹುದಾಗಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ತಿಳಿಸಿದರು.

ಪ್ರತಿ ಮನೆಗೆ ಅಗ್ನಿಹೋತ್ರವನ್ನು ತಲುಪಿಸುವ ಅಭಿಯಾನ ಕೈಗೊಳ್ಳೋಣ. ಮುಂದಿನ ವರ್ಷ ಅಂತರಾಷ್ಟ್ರೀಯ ಅಗ್ನಿಹೋತ್ರ ದಿನದವರೆಗೆ ಈ ಅಭಿಯಾನವನ್ನು ಯಶಸ್ವಿಗೊಳಿಸುತ್ತ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಅಗ್ನಿಹೋತ್ರ ಅಭ್ಯಾಸ ಮಾಡಲು ಪ್ರೇರೇಪಿಸೋಣ ಎಂದು ಹೇಳಿದರು.

ಔಷಧೀಯ ಗಿಡಮೂಲಿಕೆಗಳನ್ನು ಉಪಯೋಗಿಸಿ ಅಗ್ನಿಹೋತ್ರ ಅಭ್ಯಾಸ ಮಾಡಿದರೆ ಗಿಡಮೂಲಿಕೆಯಲ್ಲಿರುವ ಔಷಧಿ ಗುಣಗಳು ಪ್ರಾಣಾಯಾಮದ ಮೂಲಕ ನಮ್ಮ ದೇಹ ತಲುಪುತ್ತದೆ. ವಾತಾವರಣದಲ್ಲಿನ ವಾಯು, ಜಲದಲ್ಲಿರುವ ವಿಷಕಾರಿಕ ಅಂಶಗಳನ್ನು ಹಾನಿಕಾರಕ ವಿಷಾಣುಗಳನ್ನು ಕಡಿಮೆ ಮಾಡುತ್ತದೆ. ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಿ, ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯ ಜಾಗಗಳಲ್ಲಿ ಅಗ್ನಿಹೋತ್ರ ಮಾಡಿದರೆ ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದು ವಿವರಿಸಿದರು.

ವಾಮನ ಶಾನಭಾಗ, ಹರ್ಷಿತಾ, ರಮೇಶ ಶೆಟ್ಟಿ, ರಮೇಶ ಭಾಪಣಾ, ರಾಜಶೇಖರ ಕುದುರಿ, ಸುಭಾಷ, ಮುತ್ತಪ್ಪ, ಪತಂಜಲಿ ವೆಲ್ನೆಸ್​ನ ಡಾ. ರಾಘವೇಂದ್ರ, ಮಹಾರಾಷ್ಟ್ರದ ಪ್ರೇಮಸಿಂಗ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net