ಒಳ ಮೀಸಲು ನೀತಿ ಜಾರಿಗೆ ಪಟ್ಟು

MLK PRATHIBATANE 06
Published on

ಮೊಳಕಾಲ್ಮೂರು: ಎ.ಜೆ.ಸದಾಶಿವ ಆಯೋಗದ ವರದಿ (ಒಳ ಮೀಸಲು) ಯಥಾವತ್ತಾಗಿ ಜಾರಿಗೊಳಿಸಬೇಕು. ಭೂ ನೋಂದಣಿ ಶುಲ್ಕ ಹೆಚ್ಚಳ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ದಸಂಸ, ರೈತಸಂಘ ಪದಾಧಿಕಾರಿಗಳು ಶುಕ್ರವಾರ ತಾಲೂಕು ಆಡಳಿತ ಸೌಧದೆದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬರಗಾಲ ರುದ್ರತಾಂಡವ ಆಡುತ್ತಿರುವ ಈ ಮಧ್ಯೆ 5 ಗ್ಯಾರಂಟಿಗಳ ಬುನಾದಿ ಮೇಲೆ ನಿಂತಿರುವ ಕಾಂಗ್ರೆಸ್ ಸರ್ಕಾರ ದುಡ್ಡು ಜೋಡಿಸಲು ಭೂ ನೋಂದಣಿ ಶುಲ್ಕ ಹೆಚ್ಚಳ ಹಾಗೂ ಮದ್ಯದ ಮೇಲೆ ದುಪ್ಪಟ್ಟು ಹೊರೆ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಹಾರದಂತೆ ನಮ್ಮ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಹಿರಂಗವಾಗಬೇಕು. ಎಚ್.ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಬೇಕು. ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರಬೇಕು. ಮೊಳಕಾಲ್ಮೂರಿನ ಉಪ ನೋಂದಣಿ ಕಚೇರಿಯನ್ನು ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಬೇಕು. ಮೊಳಕಾಲ್ಮೂರಲ್ಲಿ ಮನೆ ಅಥವಾ ಸಾರ್ವಜನಿಕ ಅಭಿವೃದ್ಧಿ ಕೆಲಸ ಕಾರ್ಯಕ್ಕೆ ಮರಳು ಬಳಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಮನೆ ಕಟ್ಟಿಕೊಳ್ಳಲು ಎತ್ತಿನಬಂಡಿಯಲ್ಲಿ ಮರಳು ಸಾಗಿಸುವ ರೈತರ ವಿರುದ್ಧ ರಾಜಕೀಯ ಪ್ರಭಾವದ ಕುಮ್ಮಕ್ಕಿನಿಂದ ಪ್ರಕರಣ ದಾಖಲಿಸುವುದು ಕೈಬಿಡಬೇಕು. ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ಕೊಂಡಾಪುರ ಪರಮೇಶಿ, ಎಚ್.ಟಿ.ಚಂದ್ರಣ್ಣ, ಮಂಜುನಾಥ, ಎಂ.ಗಂಗಾಧರ, ನಾಗರಾಜ, ಕೆ.ರಮೇಶ್, ತಿಪ್ಪೇಸ್ವಾಮಿ, ನಿಂಗಣ್ಣ, ದುರುಗೇಶ, ಚಂದ್ರಶೇಖರ, ಪ್ರಸನ್ನ, ಬಸವರಾಜ್, ಈರಣ್ಣ, ವೀರೇಶ್, ಪಾಪಯ್ಯ, ಲೋಕೇಶ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net