ಮೈಸೂರು: ಸತತ ಹೋರಾಟದ ಫಲವಾಗಿ ಇನ್ನೆರಡು ತಿಂಗಳಲ್ಲಿ ಒಳ ಮೀಸಲು ಜಾರಿಯಾಗುವುದು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವುದಕ್ಕೆ ಈಗ ನ್ಯಾಯ ದೊರೆತು ಇನ್ನೆರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿಯಾಗುವುದು ಖಚಿತ. ಇಂತಹ ಸಂದರ್ಭದಲ್ಲಿ ಸಮಾಜವನ್ನು ದಿಕ್ಕು ತಪ್ಪಿಸುವ ಸ್ವಯಂ ಘೋಷಿತ ಸಂಘಟನೆಗಳ ಪ್ರಮುಖರಿಗೆ ಮಾದಿಗ ಸಮುದಾಯ ಕಿವಿಗೊಡಬಾರದು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನ್ಯಾಯಮೂರ್ತಿ ಎನ್.ಎನ್.ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಂತೆ ಸಮೀಕ್ಷೆ ಕಾರ್ಯ ಮುಗಿಯುತ್ತಿದೆ. ಸಮೀಕ್ಷೆ ವರದಿಯು ರಾಜ್ಯ ಸರ್ಕಾರಕ್ಕೆ ಸೇರುತ್ತಿದ್ದಂತೆ ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿರುವ ಜತೆಗೆ, ಸಮೀಕ್ಷೆ ವರದಿ ಬರುತ್ತಿದ್ದಂತೆ ಒಳ ಮೀಸಲಾತಿ ಜಾರಿಗೆ ಮುಂದಾಗಿದ್ದಾರೆ. ಸಮಾಜ ಕಲ್ಯಾಣ ಸಚಿವರಿಗೂ ಒಳ ಮೀಸಲಾತಿ ಜಾರಿಗೆ ವಿರೋಧವಿಲ್ಲ. ಆದರೆ, ಕೆಲವರು ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಅವರು ಒಳ ಮೀಸಲಾತಿ ಜಾರಿಗೊಳಿಸುವುದಿಲ್ಲ ಎನ್ನುವ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಒಳ ಮೀಸಲಾತಿ ವಿಚಾರದಲ್ಲಿ ಹೋರಾಟವನ್ನೇ ಮಾಡದ ಹಾಗೂ ಸಮಾಜಕ್ಕೆ ಪರಿಚಯ ಇಲ್ಲದ, ರಾಜಕೀಯ ಪಕ್ಷಗಳಿಂದ ಪ್ರೇರೇಪಿತರಾದ ಕೆಲವು ಸ್ವಯಂ ಘೋಷಿತ ಸಂಘಟನೆಗಳು ಮತ್ತು ಮುಖಂಡರು ಹೋರಾಟದ ನೆಪದಲ್ಲಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಬದಲಿಗೆ ಅಪಪ್ರಚಾರ ಮತ್ತು ಅವಹೇಳನಕಾರಿ ಮಾತುಗಳನ್ನಾಡುತ್ತಿರುವುದು ಖಂಡನೀಯ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರವೇ ಒಳ ಮೀಸಲಾತಿ ಜಾರಿಗೊಳಿಸಲು ಸಮೀಕ್ಷೆ ವರದಿಯನ್ನು ಕಾದಿರುವಾಗ ಕೆಲವರು ವಿಳಂಬವಾಗುತ್ತದೆ ಎನ್ನುತ್ತಿದ್ದಾರೆ. ಸಮಾಜವನ್ನು ಹೈಜಾಕ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಮ್ಮ ಹೋರಾಟದಿಂದ ಮೀಸಲಾತಿ ದೊರೆಯಿತು ಎಂದು ಬಿಂಬಿಸಿಕೊಳ್ಳಲು ಜೂ.9ರಂದು ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದು ದುರುದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತವಾಗಿರುವುದರಿಂದ ಮಾದಿಗ ಸಮುದಾಯದವರು ಪಾಲ್ಗೊಳ್ಳಬಾರದು ಹಾಗೂ ಬೆಂಬಲಿಸಬಾರದು ಎಂದು ಮನವಿ ಮಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟವು ರಚನಾತ್ಮಕವಾಗಿ ಇರಬೇಕೆ ಹೊರತು ಭಾವನಾತ್ಮಕವಾಗಿ ಜನರನ್ನು ಕೆರಳಿಸುವಂತಾಗಬಾರದು. ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಇದ್ದಾಗ ಯಾವುದೇ ಹೋರಾಟ ಮಾಡದೆ ತಟಸ್ಥವಾಗಿದ್ದುಕೊಂಡಿದ್ದ ಈ ವ್ಯಕ್ತಿಗಳು ಈಗ ವಿಪಕ್ಷಗಳ ಚಿತಾವಣೆಗೆ ಒಳಗಾಗಿದ್ದಾರೆ. ಈ ಮೂಲಕ ಸಮಾಜದಲ್ಲಿ ಗೊಂದಲ ಮೂಡಿಸಿ ಒಳ ಮೀಸಲಾತಿ ನೀಡುವುದನ್ನು ತಡೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಮಾಜಿ ಮೇಯರ್ ನಾರಾಯಣ, ನಗರಪಾಲಿಕೆ ಮಾಜಿ ಸದಸ್ಯ ಸುನಂದಕುಮಾರ್, ಮುಖಂಡರಾದ ಮರಾ, ಸುಧಾ ಮಹದೇವಯ್ಯ, ಎಂ.ಶಿವಮೂರ್ತಿ ಇತರರು ಇದ್ದರು.