

ಮೈಸೂರು: ರಾಜ್ಯ ಮಾತಂಗ ಜಾಗೃತಿ ಸಮಿತಿ ವತಿಯಿಂದ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಒಳ ಮೀಸಲಾತಿ ಸಮೀಕ್ಷೆ ಕುರಿತು ಮಾಜಿ ಸಚಿವ ಕೋಟೆ ಶಿವಣ್ಣ ಅಧ್ಯಕ್ಷತೆಯಲ್ಲಿ ಮಾದಿಗ ಸಮುದಾಯ ಮುಖಂಡ ಸಭೆ ನಡೆಯಿತು.
ಮಾಜಿ ಸಚಿವ ಕೋಟೆ ಶಿವಣ್ಣ ಮಾತನಾಡಿ, ಒಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಸಮೀಕ್ಷೆಗೆ ಮಾದಿಗ ಸಮುದಾಯದವರು ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು. ಸಮೀಕ್ಷೆ ನಡೆಸುವವರು ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ. ಅವರು ಕೇಳುವ ದಾಖಲೆಗಳನ್ನು ನೀಡಿ, ಜಾತಿ ಕಾಲಂನಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸಬೇಕು ಎಂದು ಕರೆ ನೀಡಿದರು.
ಸಮಿತಿ ರಾಜ್ಯ ಗೌರವಾಧ್ಯಕ್ಷ ಲೋಕೇಶ್ ಮಾತನಾಡಿ, ಒಳ ಮೀಸಲಾತಿ ಕಲ್ಪಿಸುವ ಸಲುವಾಗಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಆಯೋಗ ರಚಿಸಿರುವುದು ಸ್ವಾಗತಾರ್ಹ. ನಮ್ಮ ಹೋರಾಟದ ಫಲವಾಗಿ ಆಯೋಗ ರಚನೆಯಾಗಿದೆ ಎಂದು ಹೇಳಿದರು.
ಸದಾಶಿವ ಆಯೋಗ 2001ರಲ್ಲಿ ನಡೆಸಿದ ಸಮೀಕ್ಷೆ ಸಂದರ್ಭ ರಾಜ್ಯದಲ್ಲಿ ಮಾದಿಗರು ಕೇವಲ 50, 158 ನೋಂದಾಯಿಸಿಕೊಂಡಿ ದ್ದರು. ಉಪ ಜಾತಿಗಳು ಎಂದು 3,690 ಜನರು ನೋಂದಾಯಿಸಿಕೊಂಡಿದ್ದರು. ಇದೀಗ ನಾಗಮೋಹನ್‌ದಾಸ್ ಆಯೋಗವು 2011ರ ಜನಗಣತಿ ಆಧಾರದ ಮೇಲೆ ಗಣತಿ ನಡೆಸುತ್ತಿದೆ. ಗಣತಿ ಸಂದರ್ಭ ಮಾದಿಗ ಸಮುದಾಯದವರು ಸರಿಯಾದ ಮಾಹಿತಿ ನೀಡಬೇಕು ಎಂದು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಮೇ.5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಒಟ್ಟು 42 ಪ್ರಶ್ನೆಗಳು ಇದ್ದು, ಅವುಗಳಿಗೆ ಸೂಕ್ತ ಉತ್ತರ ನೀಡಬೇಕು ಹಾಗೂ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು. ಕೆಲವರು ಬೇರೆ ಧರ್ಮಕ್ಕೆ ಮತಾಂತರವಾಗಿದ್ದು, ಅವರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಸಮೀಕ್ಷೆಯಲ್ಲಿ ಧರ್ಮ ಇಲ್ಲ. ಹಾಗಾಗಿ ಮಾದಿಗ ಎಂದು ನಮೂದಿಸಿ. ಸಮೀಕ್ಷೆ ಸಂದರ್ಭ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿದ್ದು, ಆಧಾರ್ ಇಲ್ಲದೆ ಇರುವವರು ತಕ್ಷಣ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ತಾತ್ಕಾಲಿಕ ಆಧಾರ್ ನಂಬರ್ ಪಡೆದುಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನಾ ಮಾತನಾಡಿ, ಸಮೀಕ್ಷೆಯಿಂದ ಯಾವುದೇ ಕುಟುಂಬ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಹಳ್ಳಿಗಳಲ್ಲಿ ಅಕ್ಕಪಕ್ಕದಲ್ಲಿಯೇ ಮನೆಗಳು ಇರುತ್ತದೆ. ಅಲ್ಲದೆ, ಎಲ್ಲರು ಪರಿಚಿತರು ಇರುವ ಹಿನ್ನೆಲೆಯಲ್ಲಿ ಸುಲಭವಾಗಿ ಸಮೀಕ್ಷೆ ನಡೆಸಬಹುದು. ಆದರೆ, ನಗರ ಪ್ರದೇಶದ ಹೊಸ ಬಡಾವಣೆಗಳಲ್ಲಿ ದೂರ ದೂರದಲ್ಲಿ ಒಂದು ಮನೆಗಳು ಇರುತ್ತವೆ. ಅವರ ಕುರಿತು ಮಾಹಿತಿ ಸಹ ಇರುವುದಿಲ್ಲ. ಹೀಗಾಗಿ ಸಮೀಕ್ಷೆ ನಡೆಸುವವರು ಯಾವುದೇ ಮನೆಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಸಮೀಕ್ಷೆ ಸಂದರ್ಭ ಮಾದಿಗ ಎಂದು ಸ್ಪಷ್ಟವಾಗಿ ಬರೆಸಬೇಕು. ಇಲ್ಲವಾದಲ್ಲಿ ನಮ್ಮ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ದೊರೆಯುವುದಿಲ್ಲ, ಕೇವಲ ಶೇ.1ರಷ್ಟು ಮೀಸಲಾತಿಗೆ ನಾವು ಸೀಮಿತರಾಗುತ್ತೇವೆ. ಎಚ್.ಡಿ.ಕೋಟೆಯಲ್ಲಿ ವಿಶೇಷ ಸಭೆ ಮಾಡಿ ಗ್ರಾಮಕ್ಕೆ ಒಂದು ತಂಡ ನೇಮಿಸಲಾಗಿದ್ದು, ತಂಡದಲ್ಲಿ 5 ವಿದ್ಯಾವಂತರನ್ನು ನೇಮಕ ಮಾಡಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 37 ಗ್ರಾಮಗಳನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದರು.
ಸಮೀಕ್ಷೆ ಸಂದರ್ಭ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಬೇಕು. ರೇಷನ ಕಾರ್ಡ್‌ನಿಂದ ಕುಟುಂಬದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಆದಿ ಕರ್ನಾಟಕ, ಆದಿ ದ್ರಾವಿಡ ಸೇರಿದಂತೆ ಇತರೆ ಉಪಜಾತಿಗಳು ಇರುತ್ತವೆ ಈ ವೇಳೆ ಗಮನ ಹರಿಸಿ ಜಾತಿ ಆಯ್ಕೆ ಮಾಡಬೇಕು. ನಂತರ ಶೈಕ್ಷಣಿಕ ಮಾಹಿತಿ ಭರ್ತಿ ಮಾಡಬೇಕು. ಕುಟುಂಬದ ಮುಖ್ಯಸ್ಥರ ಮಾಹಿತಿ ಜತೆಗೆ ಫೋಟೋ ತೆಗೆದುಕೊಳ್ಳಬೇಕು. ಕೊಟ್ಟಿರುವ ಮಾಹಿತಿಯು ಸರಿ ಇದೆಯಾ ಎಂದು ಅಂತಿಮವಾಗಿ ಪರೀಕ್ಷಿಸಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ನೀಡಿ ಒಟಿಪಿ ಹಾಕಿದರೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ. ಮೊಬೈಲ್ ಸಂಖ್ಯೆ ಇಲ್ಲವಾದರೆ ಸಹಿ ಹಾಕಲು ಅವಕಾಶವಿದೆ ಎಂದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ಯಾಂ ಪ್ರಸಾದ್, ರಾಜ್ಯ ಮಾತಂಗ ಜಾಗೃತಿ ಸಮಿತಿಯ ಮೈಸೂರು ವಿಭಾಗೀಯ ಅಧ್ಯಕ್ಷ ಬಿ.ಎಸ್.ರಂಗನಾಥ್ ಪ್ರಸಾದ್, ಸಮುದಾಯದ ಮುಖಂಡರಾದ ಪ್ರೊ.ವೆಂಕಟೇಶ್ ಕುಮಾರ್, ಶಿವಪ್ರಸಾದ್ ಹಾಗೂ ಇತರರು ಇದ್ದರು.