

ಹೊಳೆನರಸೀಪುರ: ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ ವರ್ಗೀಕರಣ ಮಾಡಿ ಒಳ ಮೀಸಲಾತಿ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಸಂಭ್ರಮ ಪಡುವಂತಹದ್ದೇನಿಲ್ಲ. ಮಾದಿಗ ಸಮಾಜಕ್ಕೆ ಇದೊಂದು ಸಮಾಧಾನಕರ ವಿಚಾರ ಅಷ್ಟೆ ಎಂದು ದಂಡೋರ ರಿಸರ್ವೇಶನ್ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್.ವಿಜಯ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಂಡೋರ ಸಮಿತಿಯ ತಾಲೂಕು ಘಟಕದಿಂದ ಒಳ ಮೀಸಲಾತಿ ಘೋಷಣೆ ಬಳಿಕ ಮುಂದಿನ ರೂಪುರೇಷೆ ಕುರಿತು ಚರ್ಚಿಸುವ ಸಂಬಂಧ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ನಮ್ಮ ಸಮಾಜ ಅಸಂಘಟಿತವಾಗಿದ್ದು, ಜಾಗೃತಗೊಳ್ಳದಿರುವುದು ಕೂಡ ಸಾಮಾಜಿಕ ನ್ಯಾಯದ ಹಿನ್ನೆಲೆಯ ನಮ್ಮ ಪಾಲು ಸಂಪೂರ್ಣವಾಗಿ ಪಡೆಯುವಲ್ಲಿ ಹಿನ್ನಡೆಯಾಗಿದೆ. ಆದರೂ ನಾವು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಒಳ ಮೀಸಲಾತಿಗಾಗಿ ರಾಜ್ಯ ಮತ್ತು ಗ್ರಾಮ ಮಟ್ಟದಿಂದ ಹೋರಾಟ ಮಾಡಿದ ಕಾರ್ಯಕರ್ತರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಾಸನ ಜಿಲ್ಲೆಯಲ್ಲಿ ಸಂಘಟಿಸುವ ಬಗ್ಗೆ ಚರ್ಚಿಸಿದರು.
ತಾಪಂ ಮಾಜಿ ಅಧ್ಯಕ್ಷ ಸಿ.ಆರ್.ಮಂಜುನಾಥ್ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯಲ್ಲಿ ಕಳೆದ 35 ವರ್ಷಗಳಿಂದ ಹೋರಾಟ ಮಾಡಿದ ಈ ಸಮುದಾಯದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗರಾದಿಯಾಗಿ ಕರ್ನಾಟಕ ರಾಜ್ಯದಲ್ಲಿ ಚಳವಳಿ ರೂಪಿಸಿದ ಎಂ. ಶಂಕ್ರಪ್ಪ, ಪಾವಗಡ ಶ್ರೀರಾಮ್ ಸೇರಿದಂತೆ ಅನೇಕ ಹೋರಾಟಗಾರರಿಗೆ ಸಮುದಾಯ ಅಭಿನಂದಿಸುತ್ತದೆ ಎಂದರು.
ಸಮಿತಿ ವಕ್ತಾರ ಕೆ.ಎಂ.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದರು. ಆ ಜನಸಂಖ್ಯೆಯಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ದತ್ತಾಂಶಗಳ ಅನ್ವಯ ಒಳ ಮೀಸಲಾತಿ ಜಾರಿಯಾಗಬೇಕಾಗಿತ್ತು. ಇದಾಗದಿರುವುದು ವಿಷಾದಕರ. ಹಾಗೆಯೇ ನಮ್ಮ ಸಮುದಾಯಕ್ಕಿಂತಲೂ ನಿಕೃಷ್ಟ ಬದುಕು ನಡೆಸುತ್ತಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನಿಗದಿಪಡಿಸಬೇಕು, ಅಸ್ಪಶ್ಯ ದಲಿತರ ಜತೆ ಅವರಿಗೆ ನ್ಯಾಯ ಸಿಗುವುದಿಲ್ಲ. ಸರ್ಕಾರ ಅಲೆಮಾರಿಗಳ ಬಗ್ಗೆ ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಹಿಮ್ಸ್ ನಿರ್ದೇಶಕ ರವೀಶ್ ಬಸವಪುರ ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು 26 ವರ್ಷಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಚಳವಳಿ ಮುನ್ನಡೆಸುತ್ತಿರುವ ವಿಜಯ್ ಕುಮಾರ್ ಹಾಗೂ ಸಿ.ಆರ್.ಮಂಜುನಾಥ್ ಅವರನ್ನು ದಂಡೋರ ಪ್ರಜ್ವಲ್ ಸಮಿತಿಯ ತಾಲೂಕು ಘಟಕ ಅಭಿನಂದಿಸಿತು.
ಬೇಲೂರಿನ ಲಕ್ಷ್ಮಣ್ ತಾಲೂಕು ಕಾರ್ಯದರ್ಶಿ ಎಚ್.ಆರ್.ರಾಮದಾಸ್, ಹಿರಿಯ ಮುಖಂಡರಾದ ರಂಗೇನಹಳ್ಳಿ ರಾಜಣ್ಣ, ಓಡನಳ್ಳಿ ಚೆನ್ನಪ್ಪ, ರಮೇಶ್, ಕಡುವಿನ ಕೋಟೆ ಶ್ರೀನಿವಾಸ್, ಶಶಿಕುಮಾರ್, ಚಂದ್ರು, ಗಾಂಧಿನಗರದ ಮಹೇಶ್, ಕಡವಿನ ಹೊಸಹಳ್ಳಿಯ ಸತೀಶ್, ಚಿಕ್ಕಣ್ಣ, ಶಿವಮೂರ್ತಿ, ರಾಘವೇಂದ್ರ, ಕಿರಣ್, ರವಿಕುಮಾರ್, ಕೆರಗೋಡು ಸೋಮಣ್ಣ, ಪ್ರಜ್ವಲ್, ನಿವೃತ್ತ ಶಿಕ್ಷಕರಾದ ತೇಜೂರು ಕರಿಯಪ್ಪ, ಆನೇಕನ್ನಂಬಾಡಿ ಬಲರಾಮು, ತೆರಣ್ಣ ಶಿವರಾಜು ಇತರರಿದ್ದರು.