ಮಾದಿಗರಿಗೆ ಒಳ ಮೀಸಲಾತಿ ಅಗತ್ಯ : ಮಾಜಿ ಸಚಿವ ಎಚ್. ಆಂಜನೇಯ

Aanjaneya
Published on

ಮೈಸೂರು: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಯುತ್ತಿದ್ದು, ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ ‘ಮಾದಿಗ’ ಎಂದು ಸ್ಪಷ್ಟವಾಗಿ ಬರೆಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿದರು.

ಮಾದಿಗ ಸಮುದಾಯದವರು ಜಾತಿ ಸಮೀಕ್ಷೆ ಸಂದರ್ಭ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿಆಂಧ್ರ ಎಂದು ಬರೆಸಬಾರದು. ಒಂದು ವೇಳೆ ಹಾಗೆ ಬರೆಸಿದರೂ ಉಪ ಜಾತಿ ಕಾಲಂನಲ್ಲಿ ‘ಮಾದಿಗ’ ಎಂದು ಕಡ್ಡಾಯವಾಗಿ ಬರೆಸಬೇಕು. ಯಾರು ಸಹ ಜಾತಿಗಣತಿಯಿಂದ ಹೊರಗುಳಿಯಬಾರದು. ಇಂದು ಹುಟ್ಟಿದ ನವಜಾತ ಶಿಶುವನ್ನು ಸಹ ಜಾತಿ ಗಣತಿಗೆ ಸೇರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾದಿಗ ಸಮುದಾಯದವರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಮಿಸಲಾತಿ ಪಡೆಯಲು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಪರಿಶಿಷ್ಟ ಜಾತಿ ಕೆಟಗರಿಯಲ್ಲಿ 101 ಜಾತಿಗಳು ಇವೆ. ಇದರಲ್ಲಿ ಮಾದಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ನಮಗೆ ಪ್ರಬಲ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಮಗೆ ಒಳಮೀಸಲಾತಿ ಅಗತ್ಯವಿದೆ ಎಂದರು.

ಒಳ ಮೀಸಲಾತಿ ಜಾರಿಗಾಗಿ ಮೂರು ದಶಕಗಳಿಂದ ಸುದೀರ್ಘ ಹೋರಾಟ ನಡೆದಿದೆ. ಇದು ಈಗ ಮುಖ್ಯವಲ್ಲ ಆದರೆ, ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದು ಬರೆಯಿಸುವ ಮುಖಾಂತರ ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲನ್ನು ಪಡೆದುಕೊಳ್ಳುವುದು ಮುಖ್ಯ ಎಂದರು.

ಒಳ ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಒಳ ಮೀಸಲಾತಿ ಜಾರಿಯಿಂದ ನಮ್ಮ ಸಮುದಾಯದ ಹಲವಾರು ಯುವಜನರಿಗೆ ಸರ್ಕಾರಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸದಸ್ಯ ಧರ್ಮಸೇನ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಮೇಯರ್ ಎ. ನಾರಾಯಣ, ವಕೀಲ ರಂಗನಾಥ್ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net