

ತುಮಕೂರು: "ಯಾವನ್ರೀ ನಿಮಗೆ ಹೇಳಿದ್ದು.. ಒಳಮೀಸಲಾತಿ ಜಾರಿಗೆ ನಾವೇ ಆಯೋಗ ಮಾಡಿ ನಾನೇ ವಿರೋಧ ಮಾಡುತ್ತೀನಾ?' ಈ ರೀತಿ ಕ್ಷುಲ್ಲಕ ಪ್ರಶ್ನೆ ಕೇಳಬೇಡಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪತ್ರಕರ್ತರ ಮೇಲೆ ಸಿಟ್ಟಾದ ಟನೆ ನಡೆಯಿತು.
ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ , ಒಳಮೀಸಲಾತಿಗೆ ನಾನು ವಿರೋಧಿಸಿರುವ ಬಗ್ಗೆ ಏನಾದರೂ ಮಾಹಿತಿ ಇದ್ದರೆ ಹೇಳಿ, ಪ್ರಶ್ನೆ ಕೇಳುವಾಗ ಅದಕ್ಕೆ ಪೂರಕ ಮಾಹಿತಿ ಇಟ್ಟುಕೊಂಡು ಕೇಳಬೇಕು. ಸುಮ್ಮನೇ ಕೇಳುವುದಲ್ಲ. ಸಂಪುಟಸಭೆಯಲ್ಲಿ ನಿರ್ಧಾರ ಮಾಡಿದ್ದೀವಿ. ಅಲ್ಲದೆ, ಒಳಮೀಸಲಾತಿ ಜಾರಿ ಮಾಡುತ್ತೀವೆಂದು ನೂರು ಬಾರಿ ಹೇಳಿದ್ದೀವಿ. ಚುನಾವಣಾ ಪ್ರಣಾಳಿಕೆಯಲ್ಲು ಭರವಸೆಕೊಟ್ಟಿದ್ದೇವು ಅದರಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಒಳಮೀಸಲು ಸಂಬಂಧ ನಿರ್ದೇಶನ ಬಂದ ಮೇಲೆ ದತ್ತಾಂಶಗಳು ಸರಿಯಿಲ್ಲ ಎಂಬ ಕಾರಣಕ್ಕೆ ಆಯೋಗ ರಚನೆ ಮಾಡಿದ್ದೆವು. ಈಗ ದತ್ತಾಂಶ ಬಂದಿದ್ದು ಅದನ್ನು ಜಾರಿ ಮಾಡಲಿಕ್ಕೆ ಆ.16ರಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಅದರಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.