

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣಕ್ಕೆ ನ್ಯಾ.ನಾಗಮೋಹನದಾಸ್ ನೀಡಿರುವ ವರದಿಯಲ್ಲಿ ಹೊಲೆಯ, ಛಲವಾದಿ ಸಂಬಂಧಿ ಜಾತಿಗಳನ್ನು ಅವೈಜ್ಞಾನಿಕವಾಗಿ ಬೇರೆ ಗುಂಪುಗಳಿಗೆ ಸೇರಿಸುವ ಅನ್ಯಾಯವಾಗಿದ್ದು, ಸಚಿವ ಸಂಪುಟ ಉಪ ಸಮಿತಿ ರಚಿಸಿ ಸರಿಪಡಿಸಬೇಕೆಂದು ಬಲಗೈ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ರವೀಂದ್ರನಾಥ ಪಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲು ವರ್ಗೀಕರಣಕ್ಕೆ ಹೊಸ ದತ್ತಾಂಶ ಸಂಗ್ರಹಿಸಿಲು ಸುಪ್ರಿಂಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿದೆ. ವರ್ಗೀಕರಣ ನ್ಯಾಯಸಮ್ಮತ, ಅಗತ್ಯ ಪೂರ್ಣ ಅಂಕಿ ಅಂಶಗಳ ಒಳಗೊಂಡಿರಬೇಕು. ಅನುಕೂಲಸಿಂಧು ರಾಜಕಾರಣಕ್ಕೆ ಮನಬಂದಂತೆ ವರ್ಗೀಕರಣ ಮಾಡದಂತೆಯೂ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ತೀರ್ಮಾನವು ನ್ಯಾಯಾಂಗದ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ. ಆಂತರಿಕ ವರ್ಗೀಕರಣದಲ್ಲಿ ಯಾವುದೇ ವಿಭಾಗವನ್ನು ಹೊರಗಿಡುವದಕ್ಕೂ ಅವಕಾಶವಿಲ್ಲ. ಆದರೆ ನ್ಯಾ. ನಾಗಮೋಹನ ದಾಸ್ ಇವರು ನೀಡಿರುವ ವರದಿಯಲ್ಲಿ ಐದು ವಿಭಾಗಗಳನ್ನು ಮಾಡಲಾಗಿದ್ದು ಅವೈಜ್ಞಾನಿಕವಾಗಿ ಹೊಲಯ ಸಂಬಂಧಿತ 11 ಜಾತಿಗಳನ್ನು ಪ್ರವರ್ಗ ಎ, ಪ್ರವರ್ಗ ಬಿದಲ್ಲಿ ಎರಡು, ಪ್ರವರ್ಗ ಇದಲ್ಲಿ ಮೂರು ಜಾತಿಗಳನ್ನು ಸೇರ್ಪಡೆ ಮಾಡಿದ್ದರಿಂದ ಹೊಲೆಯ ಸಂಬಂಧಿತ ಜಾತಿಗಳ ಜನಸಂಖ್ಯೆಯಲ್ಲಿ ಇಳಿಕೆಯಾಗಲು ಕಾರಣವಾಗಿದೆ. 36,10,263 ಜನಸಂಖ್ಯೆ ಹೊಲೆಯ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರ್ಪಡೆಯಾಗಬೇಕು.
ರಾಜ್ಯ ಸರ್ಕಾರ ಆ.16 ರಂದು ವಿಶೇಷ ಸಚಿವ ಸಂಪುಟದಲ್ಲಿ ಚರ್ಚಿಸಲು ಮುಂದಾಗಿದೆ. ಸಚಿವ ಉಪ ಸಮಿತಿರಚಿಸಿಗೊಂದಲ ನಿವಾರಿಸಬೇಕು. ಮೀಸಲು ಪ್ರಮಾಣ ಶೇ.17 ಹೆಚ್ಚಳ ಮಾಡಿರುವದು ಹೈಕೋರ್ಟ್‌ನಲ್ಲಿ ತಡೆಯಾಜ್ಞೆಯಿದೆ. ಪರಿಶಿಷ್ಟ ಜಾತಿ 101 ಜಾತಿಗಳಿಗೂ ನ್ಯಾಯ ಒದಗಿಸಬೇಕೆಂದರು. ಈ ಸಂದರ್ಭದಲ್ಲಿ ಎಂ.ಈರಣ್ಣ , ಜಗನ್ನಾಥ ಸುಂಕಾರಿ, ನರಸಿಂಹಲು ನೆಲಹಾಳ, ರಾಜುಪಟ್ಟಿ, ಯಲ್ಲಪ್ಪ ಬೊಮ್ಮನಾಳ, ಮಹೇಶ ಇದ್ದರು.