

ಚಿಕ್ಕಬಳ್ಳಾಪುರ: ಒಳ ಮೀಸಲಾತಿ ವರ್ಗೀಕರಣದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ನಡೆಸಿರುವ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ.೯೪.೯೧ ರಷ್ಟು ಪರಿಶಿಷ್ಟರು ಭಾಗಿಯಾಗಿದ್ದಾರೆ. ಈ ಭಾಗದಲ್ಲಿ ೭೪,೦೪೪ ಎಸ್ಸಿ ಕುಟುಂಬಗಳಿದ್ದು ೨,೯೬,೬೫೬ ಸದಸ್ಯರು ಇದ್ದಾರೆ ಎನ್ನುವುದು ಹೊಸ ವರದಿಯಲ್ಲಿ ತಿಳಿದು ಬಂದಿದೆ. ಸದಾ ಶಿವಯೋಗ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಬೇಕೆಂಬ ಹಲವು ವರ್ಷ ದಲಿತ ಸಂಘಟನೆಗಳು ನಡೆಸಿದ ಹೋರಾಟಗಳ ಹಿನ್ನೆಲೆಯಲ್ಲಿ ಸರ್ಕಾರವು ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು ಸಮೀಕ್ಷೆಗೆ ರಚಿಸಿದ್ದು ಅದರಂತೆ ಜಿಲ್ಲೆಯಲ್ಲಿ ಮೇ.೫ ರಿಂದ ಜೂ.೩೦ ರವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಕ್ರಿಯೆ ನಡೆದಿದೆ.
*ಮೀಸಲಾತಿ ವರ್ಗೀಕರಣ ಚರ್ಚೆ
ಈಗಾಗಲೇ ನಾಗಮೋಹನ್ ಆಯೋಗದ ವರದಿಯ ಅನುಮೋದನೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಯ ಒಟ್ಟಾರೆ ಮೀಸಲಾತಿ ಶೇ.೧೭ ರಲ್ಲಿ ಎಡಗೈ ಹಾಗೂ ಬಲಗೈಗೆ ತಲಾ ಶೇ.೬ ರಷ್ಟು, ಸ್ಪೃಶ್ಯ ಸಮಾಜಕ್ಕೆ ಶೇ.೫ ರಷ್ಟು ಒಳ ಮೀಸಲು ನೀಡಿರುವುದರ ಬಗ್ಗೆ ಘೋಷಿಸಿದ್ದಾರೆ. ಇದರ ನಡುವೆ ಪರಿಶಿಷ್ಟ ಜಾತಿಗೆ ಸೇರಿದ ಸಂಘಟನೆಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದು ಒಂದು ಹಂತದಲ್ಲಿ ಮೇಲೋಟ್ಕಕ್ಕೆ ಸಮಾಧಾನಗೊಂಡಂತೆ ಕಂಡರೂ ಸರ್ವಾನುಮತದ ಅಭಿಪ್ರಾಯವನ್ನು ಪರಿಗಣಿಸಿ, ಮುಂದಿನ ನಡೆಯನ್ನು ತಿಳಿಸುವ ತೀರ್ಮಾನ ಕೈಗೊಂಡಿದ್ದಾರೆ. ಪ್ರಸ್ತುತ ಅಲೆಮಾರಿ ಸಮುದಾಯದಲ್ಲಿ ಬೇಸರ ಇದೆ. ಜನಾಂಗಕ್ಕೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂಬ ಮಾತನ್ನು ಹೇಳಲಾಗುತ್ತಿದೆ.