

ವಿಜಯಪುರ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ವ್ರತ ಪಾಲಿಸುವುದರಿಂದ ಅಂತರಂಗ ಶುದ್ಧವಾಗಿ ಸಾತ್ವಿಕ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಭಾರತೀಯ ಅಯ್ಯಪ್ಪ ಸೇವಾ ಸಂದ ರಾಷ್ಟ್ರೀಯ ಉಪಾಧ್ಯ, ಗುರುಸ್ವಾಮಿ ರಾಮಚಂದ್ರ ಕರಾಂಡೆ ಹೇಳಿದರು.
ನಗರದ ಟಕ್ಕೆ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೆಟ್ಟಿಲು ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೇಕ ಜನ ಇಷ್ಟಾರ್ಥ ಸಿದ್ಧಿಗಾಗಿ, ಸಂಕಷ್ಟ ಪರಿಹಾರಕ್ಕಾಗಿ ಮಾಲೆ ಧರಿಸಿ ವ್ರತ ಪಾಲಿಸುತ್ತಾರೆ. ಸಂಕ್ರಾಂತಿ ಪರ್ವ ಕಾಲದಲ್ಲಿ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಧನ್ಯರಾಗುತ್ತಾರೆ. ಈ ವ್ರತ ಪಾಲನೆಯಿಂದ ಸಾವಿರಾರು ಜನ ದುಶ್ಚಟ ಬಿಟ್ಟು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿ ವ್ರತ ಪಾಲನೆ ಸಮಾಜ ಸುಧಾರಣೆಗೂ ಪೂರಕವಾಗಿದೆ ಎಂದರು.
ದೇವಸ್ಥಾನದಲ್ಲಿ ಬೆಳಗ್ಗೆ ಅಷ್ಟಾಭಿಷೇಕ, ಸ್ವಾಮಿಗೆ ವಿಶೇಷ ಅಲಂಕಾರ, ಸಂಜೆ ಪಲ್ಲಕ್ಕಿ ಉತ್ಸವ, ಮೆಟ್ಟಿಲು ಪೂಜೆ, ಮಹಾಮಂಗಳಾರತಿ ನಡೆಯಿತು. ವಿಶೇಷ ಸೇವಾಕರ್ತರನ್ನು ಸನ್ಮಾನಿಸಲಾಯಿತು.
ನಂತರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಸ್ವಾಮಿಗಳ ಗುರುನಮನ ಕಾರ್ಯಕ್ರಮದಲ್ಲಿ ಭಕ್ತರು ಸಿದ್ಧೇಶ್ವರ ಸ್ವಾಮಿಗಳ ಸಾಧನೆ, ಕೊಡುಗೆಯನ್ನು ಕೀರ್ತನೆಗಳ ಮೂಲಕ ಸ್ಮರಿಸಿದರು. 600ಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಗುರುರಾಜ ಗಂಗನಳ್ಳಿ, ಎಸ್.ಬಿ.ಲಕ್ಕುಂಡಿಮಠ, ಎಸ್.ಎಸ್.ಸೋಂಪೂರ, ಜಿ.ಬಿ.ದಳವೆ, ವಿಶ್ವನಾಥ ಅವರಾದಿ, ಬಿ.ಎಸ್.ಲಕ್ಕೊಂಡ, ಚಂದ್ರಶೇಖರ ನಾಗರೆಡ್ಡಿ, ಉಪಸ್ಥಿತರಿದ್ದರು.