ಛಾವಣಿ ಚೆಂದವಾಗಿದೆ ಕಣ್ರೀ…

Seelgin design - 4
Published on

ಬೆಂಗಳೂರು: ಮನೆಯ ಅಂದ ಕೇವಲ ಗೋಡೆಗೆ ಬಳಿಯುವ ಬಣ್ಣ ಹಾಗೂ ಹೊರಾಂಗಣ ವಿನ್ಯಾಸದಲ್ಲಿ ಮಾತ್ರವೇ ಅಲ್ಲ, ಛಾವಣಿಗೂ ಅನ್ವಯವಾಗುತ್ತದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಮನೆ ನಿರ್ಮಾಣದಲ್ಲಿ ಛಾವಣಿ ವಿನ್ಯಾಸಕ್ಕೆ ಬಹಳ ಮಹತ್ವ ನೀಡಲಾಗುತ್ತಿದೆ.

ಹಿಂದೆಲ್ಲ ಛಾವಣಿ ಎಂದಾಕ್ಷಣ ಹಳ್ಳಿಗಳಲ್ಲಿ ಹೆಂಚಿನ ಮನೆ, ಅಟ್ಟದ ಮನೆ ಸಾಮಾನ್ಯವಾಗಿತ್ತು. ನಂತರದಲ್ಲಿ ಆರ್‌ಸಿಸಿ ಶೀಟ್‌ಗಳು ಬಂದವು. ಈಗ ಕಟ್ಟುವ ಮನೆ ಸಣ್ಣದಿರಲಿ, ದೊಡ್ಡದಿರಲಿ ಬಹುಪಾಲು ತಾರಸಿ ಮಾಡಿಸುವುದರಿಂದ ಒಳಭಾಗದ ಛಾವಣಿಯನ್ನು ಆಕರ್ಷಕಗೊಳಿಸುವುದು ಒಂದು ಟ್ರೆಂಡ್.

ಆರಂಭದಲ್ಲಿ ಪಿಒಪಿ ಬಳಸಿ ಛಾವಣಿಗೆ ವಿವಿಧ ವಿನ್ಯಾಸಗಳನ್ನು ನೀಡಿ, ಅವುಗಳಿಗೆ ಬಣ್ಣಗಳ ಮೆರುಗು ನೀಡಲಾಗುತ್ತಿತ್ತು. ಈಗ ಅವುಗಳಿಗೆ ದೀಪಗಳನ್ನು ಇನ್ನಷ್ಟು ಆಕರ್ಷಕಗೊಳಿಸಲಾಗುತ್ತಿದೆ. ಇದೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ 3ಡಿ ಎಫೆಕ್ಟ್ ನೀಡಲಾಗುತ್ತಿದೆ. ನೂರಾರು ವಿಧದ ಕಣ್ಮನ ಸೆಳೆವ ಚಾವಣಿ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯ. ಪಡಸಾಲೆ, ಮಲಗುವ ಕೋಣೆ, ಮಕ್ಕಳ ಕೋಣೆ, ಅಡುಗೆ ಕೋಣೆ, ಊಟದ ಹಾಲ್ ಹೀಗೆ ಮನೆಯ ಪ್ರತಿ ಭಾಗಕ್ಕೂ ಹೊಂದಿಕೊಳ್ಳುವ ರೀತಿಯಲ್ಲಿ ಛಾವಣಿ ವಿನ್ಯಾಸ ಮಾಡಿಸಲಾಗುತ್ತದೆ.

ಎಲ್ಲ ಕಟ್ಟಡಗಳಿಗೂ ಬಳಕೆ: ಈಗ ಆಧುನಿಕ ವಿನ್ಯಾಸದಲ್ಲಿ ಮನೆ ಕಟ್ಟಲು ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದು ಮನೆಗಷ್ಟೇ ಸೀಮಿತವಾಗದೆ ಕಚೇರಿ, ಹೋಟೆಲ್, ಪಾರ್ಟಿ ಹಾಲ್, ಕಲ್ಯಾಣ ಮಂಟಪ ಸೇರಿ ಎಲ್ಲ ಬಗೆಯ ಕಟ್ಟಡಗಳ ನಿರ್ಮಾಣದಲ್ಲಿ ಛಾವಣಿ ವಿನ್ಯಾಸ ಪ್ರಮುಖ್ಯತೆ ಪಡೆದುಕೊಂಡಿದೆ. ಹೀಗಾಗಿ ಅತ್ಯುತ್ತಮ ಛಾವಣಿ ವಿನ್ಯಾಸಗಳನ್ನು ಆಯ್ಕೆ ಮಾಡುವುದು ಒಂದು ಕಲೆ.

ಕಡಿಮೆ ಸಮಯದಲ್ಲಿ ಹೊಸ ಲುಕ್: ಯಾವುದೇ ವಿನ್ಯಾಸ ಇಲ್ಲದ ಛಾವಣಿಗೆ ಪ್ಲಾಸ್ಟರ್ ಬೋರ್ಡ್‌ಗಳನ್ನು ಅತಿಕಡಿಮೆ ಸಮಯದಲ್ಲಿ ಅಳವಡಿಸಬಹುದು. ಇದು ಮನೆಗೆ ಇನ್ನಷ್ಟು ಮೆರುಗು ನೀಡುತ್ತದೆ. ಮಕ್ಕಳ ಕೋಣೆಯಲ್ಲಿ ರಾತ್ರಿ ವೇಳೆ ನಕ್ಷತ್ರಗಳು ಕಾಣುವಂತೆ, ಇತರೆ ಕೊಠಡಿಗಳಿಗೆ ಅವರದೇ ಆಯ್ಕೆಯ ಸಮುದ್ರದ ಅಲೆಗಳು ಚಲಿಸಿದಂತೆ ಹೀಗೆ ವಿವಿಧ ವಿನ್ಯಾಸಗಳ ಛಾವಣಿಗೆ ಬೇಡಿಕೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net