ಮನೆ ಹಳೆಯದಾದರೂ ನೋಟ ನವನವೀನ!

1
Published on

ಬೆಂಗಳೂರು: ಮನೆ ಚಿಕ್ಕದಿರಲಿ, ದೊಡ್ಡದಿರಲಿ ನೋಡಲು ಚೆನ್ನಾಗಿರಬೇಕು. ಹಾಗಾಗಿ ಮನೆಗೆ ಒಂದು ಹೊಸ ಲುಕ್ ನೀಡುವ ಪ್ರಯತ್ನ ನಿರಂತರವಾಗಿರುತ್ತದೆ. ಇದಕ್ಕೆಲ್ಲ ತುಂಬ ಹಣ ಖರ್ಚು ಮಾಡಬೇಕು ಎಂದೇನಿಲ್ಲ, ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕ ಕಡಿಮೆ ಖರ್ಚಿನಲ್ಲಿ ಮನೆಯ ಅಂದವನ್ನು ಇಮ್ಮಡಿಗೊಳಿಸಬಹುದಾಗಿದೆ.

ಕಾಲಕಾಲಕ್ಕೆ ಮನೆಯನ್ನು ಸ್ವಚ್ಛಗೊಳಿಸಿದರಷ್ಟೇ ಸಾಲದು. ಜತೆಗೆ ಒಂದಿಷ್ಟು ಬದಲಾವಣೆಗಳನ್ನು ಮಾಡುತ್ತಿರಬೇಕು. ಇದು ಅಡುಗೆ ಮನೆಯಿಂದ ಆರಂಭವಾಗಿ ಮನೆಯ ಎಲ್ಲ ಭಾಗಗಳು ಹಾಗೂ ಮನೆಯ ಹೊರ ಭಾಗಗಳಿಗೂ ಅನ್ವಯ ಆಗಲಿದೆ. ಮೊದಲಿಗೆ, ಅಡುಗೆ ಮನೆಯಲ್ಲಿ ಅನಗತ್ಯವಾಗಿ ಪಾತ್ರೆಗಳು ಹಾಗೂ ದಿನಸಿ ಡಬ್ಬಗಳನ್ನು ತುಂಬಿಕೊಳ್ಳದೆ ಅಗತ್ಯಕ್ಕೆ ತಕ್ಕಷ್ಟು ಇರಿಸಿ. ದಿನಸಿ ಪದಾರ್ಥಗಳ ಡಬ್ಬಿಗಳನ್ನು ಅದರ ಗಾತ್ರಕ್ಕೆ ಅನುಗುಣವಾಗಿ ಜೋಡಿಸಿ. ಪಾತ್ರೆಗಳ ಬಳಕೆಯಲ್ಲಿ ದೈನಂದಿನ ಅಗತ್ಯತೆ ಎಷ್ಟು ಬೇಕೋ ಅಷ್ಟು ಇದ್ದರೆ ಒಳಿತು. ಅವುಗಳನ್ನು ಕೋಣೆ ತುಂಬ ಹರಡಿಕೊಳ್ಳುವ ಬದಲು ಪಾತ್ರೆ ಸ್ಟಾೃಂಡ್‌ನಲ್ಲಿ ಜೋಡಿಸಿ. ಇದರಿಂದ ಜಾಗದ ಉಳಿತಾಯವೂ ಆಗಲಿದೆ.

ದೇವರ ಕೋಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳು ಹಾಗೂ ಪೋಟೋಗಳು ಇದ್ದರೆ ಸಾಕು. ಹೋದೆಡೆಯಲ್ಲೆಲ್ಲ ದೇವರ ಫೋಟೋ ಹಾಗೂ ವಿಗ್ರಹಗಳನ್ನು ತಂದು ದೇವರ ಕೋಣೆಯಲ್ಲಿ ತುಂಬುವ ಬದಲು ನಿಮ್ಮ ಮನೆ ದೇವರ ಒಂದು ೆಟೋ, ಕಳಶ, ದೀಪ ಹೀಗೆ ಕಡಿಮೆ ವಸ್ತುಗಳಿದ್ದರೆ ಸ್ವಚ್ಛಗೊಳಿಸಲು ಸುಲಭ.

ಸ್ಟೋರೇಜ್ ಬಾಕ್ಸ್ ಬಳಸಿ: ಎಲ್ಲ ಮನೆಗಳಲ್ಲೂ ವಾರ್ಡ್‌ರೋಬ್ ಹೊಂದಿರುವುದಿಲ್ಲ. ಹಾಗಾಗಿ ಮನೆಯಲ್ಲಿನ ವಸ್ತುಗಳು ಎಷ್ಟು ಬಾರಿ ಜೋಡಿಸಿದರೂ ಚೆಲ್ಲಾಪಿಲ್ಲಿಯಾಗಿ ಕಾಣಿಸುತ್ತವೆ. ಹಾಗೆಂದು ಎಲ್ಲರಿಗೂ ವಾರ್ಡ್‌ರೋಬ್ ಮಾಡಿಸಲು ಸಾಧ್ಯವಿಲ್ಲ. ಬಾಡಿಗೆ ಮನೆಯವರಿಗಂತೂ ಇದು ಅಸಾಧ್ಯ. ಇದರಿಂದ ಮನೆಯಲ್ಲಿ ವಸ್ತುಗಳು ಹೆಚ್ಚಾದಂತೆ, ಜಾಗ ಕಡಿಮೆಯಾದಂತೆ ಭಾಸವಾಗುತ್ತದೆ. ಹೆಚ್ಚು ವಸ್ತುಗಳು ಕಣ್ಣಿಗೆ ಕಾಣಿಸುವುದರಿಂದ ಮನೆ ಸ್ವಚ್ಛವಾಗಿಲ್ಲ ಎಂಬ ಭಾವನೆ ಮೂಡುತ್ತದೆ. ಆದ್ದರಿಂದ ಅನಗತ್ಯ ವಸ್ತುಗಳನ್ನು ಕಣ್ಣಿಗೆ ಕಾಣಿಸದಂತೆ ಇಡಬೇಕು.

ವಾರ್ಡ್‌ರೋಬ್ ಇಲ್ಲದಿದ್ದರೆ ಮಾರುಕಟ್ಟೆಗಳಲ್ಲಿ ಕಡಿಮೆ ದರಕ್ಕೆ ಅಕರ್ಷಕ ವಿನ್ಯಾಸದ ಸ್ಟೋರೇಜ್ ಬಾಕ್ಸ್‌ಗಳು ಸಿಗುತ್ತವೆ. ಅವನ್ನು ತಂದು ಅದರಲ್ಲಿ ಮಕ್ಕಳ ಆಟಿಕೆ, ಬಟ್ಟೆಗಳು, ಪುಸ್ತಕಗಳು ಸೇರಿ ಸಣ್ಣಪುಟ್ಟ ವಸ್ತುಗಳನ್ನು ಜೋಡಿಸುವುದರಿಂದ ಮನೆ ಅಂದವಾಗಿ ಕಾಣುತ್ತದೆ, ಖರ್ಚು ಕಡಿಮೆ ಆಗುತ್ತದೆ. ವಾರ್ಡ್‌ರೋಬ್ ಇಲ್ಲದಿದ್ದರೆ ಮನೆಯಲ್ಲಿ ಬಟ್ಟೆಗಳನ್ನು ಜೋಡಿಸಿಡುವುದು ಮತ್ತೂ ಸಮಸ್ಯೆ. ಹಾಗಾಗಿ ಬಟ್ಟೆಗಳನ್ನು ಜೋಡಿಸುವ ಸೌಲಭ್ಯವುಳ್ಳ ಮಂಚಗಳು ಹಾಗೂ ದಿವಾನ್ ಕಾಟ್‌ಗಳು ಲಭ್ಯವಿವೆ. ಅವನ್ನು ಬಳಸಿ ಕೆಳಗೆ ಬಟ್ಟೆಗಳನ್ನು ಜೋಡಿಸಿಡಬಹುದು.

ಅಕರ್ಷಕ ಲೈಟಿಂಗ್: ಮನೆಯ ಅಂದಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತವುದು ಲೈಟಿಂಗ್. ಇತ್ತೀಚೆಗೆ ಒಳಾಂಗಣ ವಿನ್ಯಾಸ ಬಾರಿ ಸದ್ದು ಮಾಡುತ್ತಿದ್ದು, ನಿಮ್ಮ ಆರ್ಥಿಕತೆಗೆ ಅನುಗುಣವಾಗಿ ಮೇಲ್ಛಾವಣಿಗೆ ಪಿಒಪಿ ಅಳವಿಡಿಸಿ ಅದಕ್ಕೆ ಬಣ್ಣ ಬಣ್ಣದ ಲೈಟ್ ಹಾಕುವುದರಿಂದ ಮನೆಗೆ ರಿಚ್ ಲುಕ್ ನೀಡುತ್ತದೆ. ಇದೂ ದುಬಾರಿ ಎನಿಸಿದರೆ ತಮ್ಮ ಅಭಿರುಚಿಗೆ ತಕ್ಕಂತೆ ತೂಗುದೀಪಗಳನ್ನು ಬಳಸುವ ಮೂಲಕ ಮೇಲ್ಛಾವಣಿಯನ್ನು ಅಂದಗಾಣಿಸಬಹುದು.

ಕರ್ಟನ್ ಮತ್ತು ಕಾರ್ಪೆಟ್‌ಗಳ ಬಳಕೆ: ಮನೆಯ ಕಿಟಕಿ ಹಾಗೂ ಬಾಗಿಲುಗಳಿಗೆ ಗೋಡೆಯ ಬಣ್ಣಕ್ಕೆ ಹೊಂದುವಂತೆ ಕರ್ಟನ್‌ಗಳನ್ನು ಆಳವಡಿಸುವುದು, ಕಾರ್ಪೆಟ್‌ಗಳನ್ನು ಬಳಕೆ ಮಾಡುವುದು, ಇರುವ ಸೋಾಗೆ ಹೊಸ ಕುಷನ್ ಮತ್ತು ಕವರ್‌ಗಳನ್ನು ಬಳಸುವುದು, ಬಾಗಿಲಿಗೆ ಆಕರ್ಷಕ ಮ್ಯಾಟ್ ಹಾಕುವುದು ಹೀಗೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕವೇ ಅಂದ ಹೆಚ್ಚಿಸಬಹುದು. ವೆಂಟಿಲೇಟರ್‌ಗಳಲ್ಲಿ ಮನಿ ಪ್ಲಾಂಟ್ ಸೇರಿ ಮನೆಯ ಒಳಗೆ ಬೆಳಸಬಹುದಾದ ಚಿಕ್ಕಚಿಕ್ಕ ಗಿಡಗಳಿಂದ ಹಸಿರುಸ್ಪರ್ಶ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net