ಬೆಳೆ ಹಾನಿಗೆ ಮಧ್ಯಂತರ ಪರಿಹಾರ ರೂ. 25 ಸಾವಿರ ಕೊಡಿ

29-SGN-5 protest
Published on

ಶಿಗ್ಗಾಂವಿ: ಪ್ರಸಕ್ತ ವರ್ಷದಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿಗೆ ಮಧ್ಯಂತರವಾಗಿ 25 ಸಾವಿರ ರೂ. ಪರಿಹಾರ ಮತ್ತು ವಿವಿಧ ಬೆಳೆಗಳನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ದುಂಡಸಿ ಹೋಬಳಿಯ ರೈತರು ಮತ್ತು ರೈತ ಪರಸಂಘಟನೆ ಕಾರ್ಯಕರ್ತರು ಗುರುವಾರ ದುಂಡಸಿ ರೈತ ಸಂಪರ್ಕ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೊಳಗಾಗಿವೆ. ಸರ್ಕಾರ ಮಧ್ಯಂತರ ಪರಿಹಾರವಾಗಿ ರೈತನಿಗೆ 25 ಸಾವಿರ ರೂ. ಪರಿಹಾರ ನೀಡುವ ಜೊತೆಗೆ ಕಬ್ಬು, ಮಾವು ಮತ್ತು ರೇಷ್ಮೆ ಬೆಳೆಯನ್ನು ಬೆಳೆ ಹಾನಿ ಎಂದು ಪರಿಗಣಿಸುವ ಮೂಲಕ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಿ ವಿಮಾ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಕೃಷಿ ಇಲಾಖೆಯ ಸಹಾಯಧನದಲ್ಲಿ ಕೊಡುತ್ತಿರುವ ನೀರಾವರಿ ಸ್ಪಿಂಕ್ಲರ್ ಪೈಪ್​ಗಳನ್ನು ಏಳು ವರ್ಷಗಳ ಬದಲಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಕೊಡುವಂತೆ ಮಾಡಬೇಕು. ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲಾ ಬೆಳೆ ಕಟಾವು ಪ್ರಯೋಗಗಳನ್ನು ಆಯಾ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ರೈತರಿಗೆ ಮಾಹಿತಿ ನೀಡಬೇಕು. ರೈತರ ಕೃಷಿ ಸಾಲ ಮನ್ನಾ ಸೇರಿ ಓಟಿಎಸ್ ಮೂಲಕ ರೈತರ ಬೆಳೆ ಸಾಲ ಪಾವತಿಗೆ ಬ್ಯಾಂಕ್​ಗಳು ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ದುಂಡಸಿ ರೈತ ಸಂಪರ್ಕ ಕೇಂದ್ರ ಮತ್ತು ತಡಸ-ಹಾನಗಲ್ಲ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ಸಂತೋಷ ಹಿರೇಮಠ, ರೈತರ ಬೇಡಿಕೆ ಅನುಸಾರ ಇಲಾಖೆಗೆ ಸಂಬಂಧಿಸಿದಂತೆ ರ್ಚಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆ ಹಿಂಪಡೆದರು.

ಮುತ್ತಣ್ಣ ಗುಡಗೇರಿ, ಈಶ್ವರಗೌಡ ಪಾಟೀಲ, ಆನಂದ ಕೆಳಗಿನಮನಿ, ಬಿ.ಸಿ. ಗಾಣಗೇರ, ಉಳವಪ್ಪ ಪೂಜಾರ, ಈರಪ್ಪ ನೀರಲಗಿ, ಫಕೀರಪ್ಪ ವಾಲಿಕಾರ, ಎಂ.ವಿ. ಶಿವಾಜಿ, ದಾದಾಪೀರ ಮೌಲಾನವರ, ವಿಶ್ವನಾಥ ಎಲ್ಲಕ್ಕನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net