ಅಭಯಾರಣ್ಯ ವ್ಯಾಪ್ತಿಯಲ್ಲಿ ಹಸ್ತಕ್ಷೇಪ?!

layout
Published on

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದ ಬಫರ್‌ಜೋನ್‌ನಲ್ಲಿ ಮಾನವ ಹಸ್ತಕ್ಷೇಪವಾಗುತ್ತಿದೆಯೇ ಎಂದು ರಾಜ್ಯ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಅನಗತ್ಯ ಮಾನವ ಹಸ್ತಕ್ಷೇಪದಿಂದ ತ್ಯಾವರೆಕೊಪ್ಪ ಸಿಂಹಧಾಮದ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಅವರಿಗೆ ಸಚಿವರ ಆಪ್ತ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಸಚಿವ ಈಶ್ವರ ಖಂಡ್ರೆ ನಿರ್ದೇಶನದ ಮೇರೆಗೆ ಅವರ ಆಪ್ತ ಸಹಾಯಕ ಎ.ಆರ್.ರವಿ ಪತ್ರವೊಂದನ್ನು ಬರೆದಿರುವುದು ಈಗ ಸಾಕಷ್ಟು ಸದ್ದು ಮಾಡುತ್ತಿದೆ. ತ್ಯಾವರೆಕೊಪ್ಪ ಮೃಗಾಲಯದ 200-300 ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಕ್ವಾರಿ ನಡೆಯುತ್ತಿದೆ. ಮೃಗಾಲಯದ ಪಕ್ಕದಲ್ಲೇ ಬಡಾವಣೆ ನಿರ್ಮಾಣವಾಗುತ್ತಿದೆ. ಇದರ ಬಗ್ಗೆ ಜೂನ್ 19ರೊಳಗೆ ವರದಿ ನೀಡುವಂತೆ ಶಿವಮೊಗ್ಗ ಡಿಸಿಎಫ್ ಹಾಗೂ ಎಸಿಎಫ್‌ಗೆ ಪತ್ರ ಬರೆಯಲಾಗಿದೆ.
ಈ ಪ್ರದೇಶ ಬಫರ್ ವಲಯವಾಗಿದ್ದು, ಇಲ್ಲಿ ಕಾಡುಪ್ರಾಣಿಗಳು ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಕಲ್ಲು ಕ್ವಾರಿ ಹಾಗೂ ಬಡಾವಣೆ ನಿರ್ಮಾಣದಿಂದ ಕಾಡು ಪ್ರಾಣಿಗಳಿಗೆ ಇಲ್ಲವೇ ಮೃಗಾಲಯದ ಪ್ರಾಣಿಗಳಿಗೆ ತೊಂದರೆ ಅಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಅಭಯಾರಣ್ಯದ ಗಡಿಯಿಂದ ಐದು ಕಿ.ಮೀ ವ್ಯಾಪ್ತಿಯನ್ನು ಬಫರ್‌ಜೋನ್ ಎಂದು ಗುರುತಿಸಲಾಗುತ್ತದೆ. ಆ ಲೆಕ್ಕದಲ್ಲಿ ತ್ಯಾವರೆಕೊಪ್ಪ ಸಿಂಹಧಾಮ ಬಫರ್‌ಜೋನ್ ವ್ಯಾಪ್ತಿಯಲ್ಲೇ ಇದೆ. ಸಿಂಹಧಾಮದ ಪಕ್ಕದಲ್ಲೇ ಲೇಔಟ್ ನಿರ್ಮಾಣವಾಗುತ್ತಿರುವುದೂ ನಿಜ. ಆದರೆ ಪತ್ರದಲ್ಲಿ ಉಲ್ಲೇಖಿಸಿದಂತೆ ಈ ಭಾಗದಲ್ಲಿ ಯಾವುದೇ ಕಲ್ಲು ಕ್ವಾರಿಗಳಿಲ್ಲ.
ಬಫರ್ ಜೋನ್ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಇದರಲ್ಲಿ 20 ಸಾವಿರ ಚದರ ಮೀಟರ್ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ನಿಬಂಧನೆಯಿದೆ. ಈಗ ಸಿಂಹಧಾಮದ ಪಕ್ಕ ನಿರ್ಮಾಣವಾಗುತ್ತಿರುವ ಬಡಾವಣೆ ಇದೇ ಕಾರಣದಿಂದ ಗಮನ ಸೆಳೆದಿದೆ.
ಬಡಾವಣೆ ನಿರ್ಮಾಣಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದೆಯೇ, ಇದು ಬಫರ್ ಜೋನ್ ವ್ಯಾಪ್ತಿಯ ನಿಬಂಧನೆಗಳಿಗೆ ಪೂರಕವಾಗಿದೆಯೇ ಎಂಬ ಬಗ್ಗೆ ಈಗ ಅಧಿಕಾರಿಗಳು ದಾಖಲೆ ಸಂಗ್ರಹಿಸುತ್ತಿದ್ದಾರೆ. ನಂತರ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಸಚಿವರಿಗೆ ವರದಿ ನೀಡಬೇಕಿದೆ.
ಕಾಂಕ್ರೀಟ್ ಮಿಕ್ಸಿಂಗ್ ಘಟಕ:ತ್ಯಾವರೆಕೊಪ್ಪ ಮೃಗಾಲಯದ ಪ್ರವೇಶ ದ್ವಾರದಿಂದ ರಸ್ತೆಯ ಇನ್ನೊಂದು ಬದಿಯಲ್ಲಿ 300 ಮೀ ದೂರದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಘಟಕವೊಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದು ಕ್ವಾರಿಯಲ್ಲ. ಬೇರೆಡೆಯಿಂದ ಸಿಮೆಂಟ್, ಜಲ್ಲಿ, ಮರಳು, ಎಂ-ಸ್ಯಾಂಡ್ ತಂದು ಮಿಶ್ರಣ ಮಾಡಿ ಕೆಲಸದ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ಇದನ್ನು ಕ್ವಾರಿಯೆಂದು ಭಾವಿಸಿ ವರದಿ ಕೇಳಿರುವ ಸಾಧ್ಯತೆಗಳಿವೆ. ಏನೇ ಆದರೂ ಲೇಔಟ್ ಹಾಗೂ ಈ ಘಟಕ ಸಾಕಷ್ಟು ಸದ್ದು ಮಾಡುತ್ತಿವೆ.
ಅಧಿಸೂಚನೆ ಗೊಂದಲ:ಶೆಟ್ಟಿಹಳ್ಳಿ ಅಭಯಾರಣ್ಯದ ಅಧಿಸೂಚನೆ ಹೊರಬಿದ್ದಿದ್ದು 1974ರಲ್ಲಿ. ಇದರ ವ್ಯಾಪ್ತಿ 390 ಚದರ ಕಿಲೋಮೀಟರ್. ಈಗಾಗಲೇ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವ ಆವಾಸ ಸ್ಥಾನವೂ ವಿಸ್ತಾರಗೊಂಡಿದೆ. ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಅಭಯಾರಣ್ಯ ವ್ಯಾಪ್ತಿ ಪರಿಷ್ಕರಿಸಲಾಗಿದೆ. ಕೆಲ ಭಾಗಗಳನ್ನು ಕೈ ಬಿಟ್ಟು ಹೊಸದಾಗಿ ಕೆಲ ಪ್ರದೇಶಗಳನ್ನು ಅಭಯಾರಣ್ಯ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಈ ಬಗ್ಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಿಲ್ಲ. ಒಮ್ಮೆ ಈ ಪ್ರಕ್ರಿಯೆ ಮುಕ್ತಾಯವಾದರೆ ಬಫರ್ ವಲಯ ಗುರುತಿಸುವುದು ಸುಲಭವಾಗುತ್ತದೆ. ಅಭಯಾರಣ್ಯಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳು ದೂರಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net