ಸರ್ಕಾರದಿಂದ ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ : ಜಿ.ಟಿ. ದೇವೇಗೌಡ ಅಸಮಾಧಾನ

GTD
Published on

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಆಗಿಂದಾಗೆ ಹಸ್ತಕ್ಷೇಪ ಮಾಡುತ್ತಿದೆ. ಸರ್ಕಾರದ ಹಸ್ತಕ್ಷೇಪದಿಂದಲೇ ಸಹಕಾರ ಕ್ಷೇತ್ರ ಕುಂಠಿತಗೊಳ್ಳುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗ, ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಬುಧವಾರ ‘ಸಹಕಾರ’ ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸಹಕಾರ ಕ್ಷೇತ್ರ ಸ್ವತಂತ್ರವಾಗಿ ಬೆಳವಣಿಗೆ ಹೊಂದಬೇಕು. ಸಹಕಾರ ಕ್ಷೇತ್ರ ನಾಯಕತ್ವವನ್ನು ರೂಪಿಸುತ್ತದೆ. ಸಹಕಾರ ಕ್ಷೇತ್ರದ ಮೂಲಕ ಹಲವಾರು ನಾಯಕರಾಗಿದ್ದಾರೆ. ನಾಯಕರಾದ ನಂತರ ಶಾಸಕರು, ಸಚಿವರೂ ಆಗಿದ್ದಾರೆ. ಆದರೆ, ಸಾಕಷ್ಟು ಜನರು ನಾಯಕರಾಗಿ ಬೆಳವಣಿಗೆ ಹೊಂದಿದ ನಂತರ ಏರಿದ ಏಣಿಯನ್ನು ಒದೆಯುವ ರೀತಿಯಲ್ಲಿ ಸಹಕಾರ ಕ್ಷೇತ್ರವನ್ನು ನಿರ್ಲಕ್ಷಿೃಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರ ಆರ್ಥಿಕತೆಯ ಹೆಬ್ಬಾಗಿಲು ಎಂದು ಪರಿಗಣಿಸಿದ ದೇಶದ ಮೊದಲ ಪ್ರಧಾನಿ ನೆಹರು ಅವರು ಪಂಚವಾರ್ಷಿಕ ಯೋಜನೆಯಲ್ಲಿ ಸಹಕಾರ ಸಂಘಗಳಿಗೆ ಹೆಚ್ಚಿನ ಒತ್ತನ್ನು ನೀಡಿದರು. ಒಂದು ಗ್ರಾಮದಲ್ಲಿ ಸಹಕಾರ ಸಂಘ, ಶಿಕ್ಷಣ ಸಂಸ್ಥೆ ಉತ್ತಮವಾಗಿ ಸೇವೆ ಸಲ್ಲಿಸಿದರೆ ಅಂತಹ ಗ್ರಾಮ ರಾಮರಾಜ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಅಭಿಪ್ರಾಯಪಟ್ಟಿದ್ದರು ಎಂದು ಸ್ಮರಿಸಿದರು.

ಸಹಕಾರ ಸಂಘಗಳು ವ್ಯವಸಾಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕೃಷಿ ಚಟುವಟಿಕೆಗೆ ಪೂರಕವಾಗಿ ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ಈ ಕ್ಷೇತ್ರ ಮತ್ತಷ್ಟು ಬೆಳವಣಿಗೆ ಕಾಣಬೇಕಾಗಿದೆ. ಆದರೆ, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಸಂಘಗಳು ಪ್ರಾರಂಭವಾಗಿವೆ. ನಮ್ಮ ಆರ್ಥಿಕ ವ್ಯವಸ್ಥೆ ಉತ್ತಮವಾಗಲು ಸಹಕಾರದ ಸಂಘದ ಅವಶ್ಯಕತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net