

ಮುಳಬಾಗಿಲು: ಡಿಸಿಸಿ ಬ್ಯಾಂಕ್ನ 18 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 6 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ 12 ಕ್ಷೇತ್ರಗಳಲ್ಲಿ ಮುಳಬಾಗಿಲು ತಾಲೂಕಿನ ವಿಸ್ಸೆಸ್ಸೆನ್ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ತಾಲೂಕಿನ ಒಟ್ಟು 19 ಮತಗಳಲ್ಲಿ 10 ಮತ ಪಡೆದವರು ಗೆಲುವಿನ ದಡ ಸೇರಲಿದ್ದು, ಈಗ ದಿನಕ್ಕೊಂದು ತಿರುವು ಕುತೂಹಲ ಮೂಡಿಸಿದೆ.
ಮಾಜಿ ಕಾಂಗ್ರೆಸ್ಸಿಗರಾದ ಜೆಡಿಎಸ್ ಮುಖಂಡ ಜಿ.ಆನಂದ್ರೆಡ್ಡಿ ಆಪರೇಷನ್ನಿಂದ ಕಾಂಗ್ರೆಸ್ಗೆ ತುಸು ಹಿನ್ನಡೆ ಕಂಡುಬಂದಿದೆ. ಇದಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಅಭ್ಯರ್ಥಿ ಸರ್ವಗೌಡ, ಮುಖಂಡ ಕಲ್ಲುಪ್ಪಲ್ಲಿ ಪ್ರಕಾಶ್ ಬೆಂಬಲದಿಂದ ಆರಂಭಿಕ ಯಶಸ್ಸು ಕಂಡರೂ ಕೊನೇ ಸಮಯದಲ್ಲಿ ರೋಚಕ ತಿರುವು ಪಡೆದುಕೊಳ್ಳಲಿದೆ.
ಎಂ.ಸಿ.ಸರ್ವಗೌಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಇವರ ಪ್ರತಿಸ್ಪರ್ಧಿಯಾಗಿ ಕಳೆದ ಬಾರಿ ನೀಲಕಂಠೇಗೌಡ ಅವರ ಆಯ್ಕೆಗೆ ಅನುವು ಮಾಡಿಕೊಟ್ಟಿದ್ದ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಲ್ಲೂರು ವಿ. ರುಪತಿರೆಡ್ಡಿ ಪೈಪೋಟಿಗೆ ಇಳಿದಿದ್ದು ರಾಜಕೀಯ ಹೋರಾಟ ಮುಂದುವರಿದಿದೆ.
ಮುಳಬಾಗಿಲು ಶಾಸಕ ಸಮೃದ್ಧಿ ವಿ.ಮಂಜುನಾಥ್ ಆಪ್ತ ಬಳಗದ ರುಪತಿರೆಡ್ಡಿ ಮತ್ತು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್, ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ವ ಗೌಡ ತಮ್ಮ ಬಳಿ ಇರುವ ಅಸ, ಪ್ರತ್ಯಸ್ತ್ರಗಳನ್ನು ಬಳಸುತ್ತಿದ್ದಾರೆ.
ಕೆಲ ಡೆಲಿಗೇಟ್ಗಳು ನಮಗೆ ವಿರೋಧಿ ಬಣದಿಂದ ಆಮಿಷಗಳ ಕರೆ ಬರುತ್ತಿವೆ ಎಂದು ತಾವೇ ಸೃಷ್ಟಿಸಿಕೊಂಡ ಕರೆಗಳನ್ನಿಟ್ಟುಕೊಂಡು ತಮ್ಮ ಮತದ ಮೌಲ್ಯ ಹೆಚ್ಚಿಸಿಕೊಳ್ಳುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಸ್ಥಿತಿ ಎರಡು ಕಡೆಯ ಅಭ್ಯರ್ಥಿಗಳು ಮತ್ತು ರಾಜಕೀಯ ಪಗಳ ಮುಖಂಡರಿಗೆ ತಟ್ಟುತ್ತಿದೆ.
ಆಪರೇಷನ್ ತಂತ್ರಗಾರಿಕೆ
ಕಾಂಗ್ರೆಸ್ ಬೆಂಬಲಿತ ಎಮ್ಮೆನತ್ತ ಮತ್ತು ನಂಗಲಿ ವಿಎಸ್ಎಸ್ಎನ್ಗಳ ಡೆಲಿಗೇಟ್ ಮತದಾರರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರ ಪರಿಣಾಮ 8 ಮತ ಹೊಂದಿದ್ದ ಜೆಡಿಎಸ್ಗೆ ಈಗ 10 ಮತ ಸಿಗಬಹುದೆಂಬ ಲೆಕ್ಕಾಚಾರ ಜೆಡಿಎಸ್ ವಲಯದಲ್ಲಿದ್ದು, 10 ಮತಗಳನ್ನು ಹೊಂದಿದ್ದ ಕಾಂಗ್ರೆಸ್ಗೆ ಹೊಡೆತ ಎದುರಾಗಿದೆ. ಮುಖಂಡ ಕಲ್ಲುಪಲ್ಲಿ ಪ್ರಕಾಶ್, ದೇವರಾಯಸಮುದ್ರ ವಿಎಸ್ಎಸ್ಎನ್ಗಳ ಡೆಲಿಗೇಟ್ ಅನ್ನು ತಮ್ಮೊಟ್ಟಿಗೆ ಇಟ್ಟುಕೊಂಡು ತಮ್ಮ ಶಕ್ತಿ ಏನೆಂದು ಜೆಡಿಎಸ್ಗೆ ತೋರಿಸಲು ಕಾದು ಕುಳಿತಿದ್ದು, ಜತೆಗೆ ನಂಗಲಿ ಮತ್ತು ಎಮ್ಮೆನತ್ತ ಮತವನ್ನು ಸೆಳೆಯಲು ಕಾಂಗ್ರೆಸ್ನಲ್ಲಿ ತಂತ್ರಗಾರಿಕೆ ಮುಂದುವರಿದಿದೆ. ಜತೆಗೆ ಜೆಡಿಎಸ್ ಪ್ರವಾಸದಲ್ಲಿರುವ ಡೆಲಿಗೇಟ್ಗಳನ್ನು ವಿವಿಧ ಮೂಲಗಳ ಮೂಲಕ ಸಂಪರ್ಕಿಸಿ ಅಲ್ಲಿಯೇ ಇದ್ದು, ಕೊನೆ ಣದಲ್ಲಿ ಮತ ಚಲಾಯಿಸುವಂತೆ ಆಪರೇಷನ್ ತಂತ್ರಗಾರಿಕೆ ಮುಂದುವರಿದಿವೆ.
ಪ್ರಸ್ತುತ ಲೆಕ್ಕಾಚಾರ
ಜೆಡಿಎಸ್ನವರು ಹನುಮನಹಳ್ಳಿ, ಕೊತ್ತಮಂಗಲ, ಊರುಕುಂಟೆ ಮಿಟ್ಟೂರು, ಎಮ್ಮೆನತ್ತ, ಕೊಗಿಲೇರು, ಬೈರಕೂರು, ಉಗನಿ, ನಂಗಲಿ, ಹೆಬ್ಬಣಿ, ಯಲುವಹಳ್ಳಿ ವಿಎಸ್ಎಸ್ಎನ್ಗಳ ಪ್ರತಿನಿಧಿಗಳನ್ನು 20 ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಅದರಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಬ್ಲಾಕ್ ಕ್ಯಾಟ್ ಕಮಾಂಡೋಗಳ ರೀತಿ ರುಪತಿರೆಡ್ಡಿಯೊಂದಿಗೆ ಸೂಚಕರಾಗಿ ಬೇವಹಳ್ಳಿ ಶಂಕರ್ ಮಾತ್ರ ಹೊರ ಬಂದಿದ್ದಾರೆ. ಉಳಿದ ನಿರ್ದೇಶಕರನ್ನು ಭದ್ರಕೋಟೆಯಿಂದ ಹೊರಗೆ ಬಿಟ್ಟಿಲ್ಲ. ಇನ್ನು ಕಾಂಗ್ರೆಸ್ ಪರ ಇರುವ ದೊಮ್ಮಸಂದ್ರ, ಮಲ್ಲನಾಯಕನಹಳ್ಳಿ, ಆಲಂಗೂರು, ರಾಜೇಂದ್ರಹಳ್ಳಿ, ಕವತನಹಳ್ಳಿ, ಪದ್ಮಟ್ಟ, ಮುಸ್ಟೂರು, ದೇವರಾಯಸಮುದ್ರ, ಉತ್ತನೂರು ವಿಸ್ಸೆಸ್ಸೆನ್ ಡೆಲಿಗೇಟ್ಗಳು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರವಾಸದ ನೆಪದಲ್ಲಿ ಒಗ್ಗಟ್ಟು ಕಾಯ್ದುಕೊಂಡಿದ್ದಾರೆ. ಇವರಲ್ಲಿ ಬಹುತೇಕರು ಕಾಂಗ್ರೆಸ್ ಮುಂಚೂಣಿ ಮುಖಂಡರಾಗಿರುವುದು ವಿಶೇಷ.