ಸಹಕಾರಿ ಸಾಲ ಕಡಿತಕ್ಕೆ ಸಿಪಿಎಂ ಆಕ್ಷೇಪ

Published on

ಹುಬ್ಬಳ್ಳಿ: ನಬಾರ್ಡ್ ಮೂಲಕ ಸಹಕಾರಿ ರಂಗಕ್ಕೆ ನೀಡುತ್ತಿದ್ದ ಸಾಲವನ್ನು ಕಡಿತ ಮಾಡಿ, ಬಡ್ಡಿ ದರವನ್ನು ಶೇ. 1ರಿಂದ ಶೇ. 4.5ಕ್ಕೆ ಹೆಚ್ಚಿಸಿರುವುದು ಮತ್ತು ಹೆಚ್ಚುವರಿ ಸಾಲಕ್ಕೆ ಬಡ್ಡಿ ದರ ಶೇ. 8.5 ಹೆಚ್ಚಿಸಲು ಕ್ರಮ ವಹಿಸಿರುವುದು ಕೇಂದ್ರ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಧಾರವಾಡ ಜಿಲ್ಲಾ ಸಮಿತಿ ಖಂಡಿಸಿದೆ.

ಇದು ರೈತರ ಕೃಷಿ ನಾಶಕ್ಕೆ ಇಡಲಾದ ಮತ್ತೊಂದು ಹೆಜ್ಜೆಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ಇದನ್ನು ತಡೆಯಬೇಕೆಂದು ಆಗ್ರಹಿಸಿದೆ.

ರಾಜ್ಯದ ರೈತರು ತೀವ್ರ ತೊಂದರೆಗೆ ಒಳಗಾಗಲಿದ್ದಾರೆ. ಸಮರ್ಪಕ ಸಾಲ ಸಿಗದೆ ಅನಿವಾರ್ಯವಾಗಿ ಖಾಸಗಿ ಲೇವಾದೇವಿಗಾರರ ಕಡೆಗೆ ಮುಖ ಮಾಡಬೇಕಾಗುತ್ತದೆ. ಇದೇ ಕಾರಣದಿಂದ ರೈತರು ಆತ್ಮಹತ್ಯೆಗೆ ಮುಂದಾಗುವ ಸಂಭವ ಇದೆ ಎಂದು ಆತಂಕ ವ್ಯಕ್ತ ಪಡಿಸಿದೆ.

ಕರ್ನಾಟಕದಲ್ಲಿ ಕಳೆದ ಎರಡು ವರ್ಷ ಬರಗಾಲ ಎದುರಾಗಿದೆ. ಈ ಬಾರಿ ಅತಿವೃಷ್ಟಿಯ ಹಾನಿ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಹೆಚ್ಚುವರಿ ಸಾಲ ಒದಗಿಸಲು ಕ್ರಮ ವಹಿಸಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಹಾಗೂ ಇತರ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಒಳಮೀಸಲಾತಿಗೆ ಆಯೋಗ:
ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಅಗತ್ಯ ಶಿಫಾರಸುಗಳೊಂದಿಗೆ ಪರಿಶೀಲನಾ ವರದಿ ಪಡೆಯಲು ರಾಜ್ಯ ಸರ್ಕಾರ ಏಕ ಸದಸ್ಯ ಆಯೋಗವನ್ನು ರಚಿಸಿರುವ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಧಾರವಾಡ ಜಿಲ್ಲಾ ಸಮಿತಿಯು ಸ್ವಾಗತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net