ಅಶ್ಲೀಲತೆಯ ಮೇಲೆ ಆಸಕ್ತಿ ಅಪಾಯಕಾರಿ: ಬಿ.ಜಿ.ಅನಂತಶಯನ

29adarshkdga3
Published on

ಮಡಿಕೇರಿ: ಇಂದು ಭ್ರಮೆ ಮತ್ತು ವಾಸ್ತವದ ನಡುವೆ ಹೋರಾಟಗಳು ನಡೆಯುತ್ತಿದೆ. ಮಾನವನ ಮನೋಬಲ ಧ್ವಂಧ್ವದಲ್ಲಿ ಸಿಲುಕಿದೆ. ಅಶ್ಲೀಲತೆಯ ಕಡೆ ಆಕರ್ಷಣೆ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ವಿಷಾದ ವ್ಯಕ್ತಪಡಿಸಿದರು.


ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ ೬೪ನೇ ಪುಸ್ತಕ ಬರಹಗಾರ್ತಿ, ಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು ಬರೆದಿರುವ ಮಹಿಳಾ ಪ್ರಧಾನವಾದ ಅಗ್ನಿಯಾತ್ರೆ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ವಾಸ್ತವತೆಯನ್ನು ಮರೆಮಾಚಿ ಭ್ರಮಾಲೋಕವನ್ನು ಸೃಷ್ಟಿಸುವ ಕಾಲ ಇದಾಗಿದ್ದು, ಗೌರವಯುತ ಸ್ಥಾನದಲ್ಲಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸ್ತ್ರೀಯ ಬಗ್ಗೆ ಕಾಮನೆಗಳ ವಿಕೃತಿ ಮೆರೆಯುತ್ತಿದೆ. ಇತ್ತೀಚೆಗೆ ಮಕ್ಕಳ ಆಲೋಚನಾ ಲಹರಿ ಕೂಡ ಇದೇ ರೀತಿಯದ್ದಾಗಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.


ದೇವತೆಯ ಪ್ರತಿರೂಪವಾಗಿರುವ ಸ್ತ್ರೀಕುಲಕ್ಕೆ ತನ್ನದೇ ಆದ ಗೌರವವಿದೆ. ಆದರೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಯುವತಿಯರೇ ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಅಶ್ಲೀಲತೆಗೆ ಮಾರು ಹೋಗುತ್ತಿದ್ದಾರೆ ಎಂದರು.


ಸಮಾಜದ ಸುಧಾರಣೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದೆ. ಪುಸ್ತಕ ಮತ್ತು ಸಿನಿಮಾದ ರೂಪದಲ್ಲಿ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಗುರುತಿಸಿಕೊಳ್ಳಲು ಮಹಿಳಾ ಬರಹಗಾರ್ತಿಯರಿಗೆ ಧೈರ್ಯ ಬೇಕು. ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಈರಮಂಡ ಹರಿಣಿ ವಿಜಯ್ ಅವರು ಧೈರ್ಯದಿಂದ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೊಡವ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ೧೫ ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತ್ತು ವಿದೇಶದಲ್ಲಿ ಕೊಡವ ಜಾನಪದ ಕಲೆಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ಹಲವು ವಿದ್ಯಾರ್ಥಿಗಳು ಕಲಾವಿದರಾಗಿ ಮಾರ್ಪಟ್ಟಿದ್ದಾರೆ. ನನ್ನ ಕಲಾ ಸೇವೆಯ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಪರಿಣಾಮ ಇಂದು ನನಗೆ ಪದ್ಮಶ್ರೀಯಂತಹ ಪ್ರಶಸ್ತಿ ಲಭಿಸಿದೆ ಎಂದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಎಂ.ಎ.ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ತ್ರೀದೌರ್ಬಲ್ಯದ ದುರ್ಬಳಕೆಯಾಗುತ್ತಿದೆ. ಮಹಿಳಾ ಬರಹಗಾರ್ತಿಯರಿಂದ ಸ್ತ್ರೀಹೋರಾಟ, ಬದುಕು, ಬವಣೆಗಳ ಬರಹವನ್ನು ನಿರೀಕ್ಷಿಸಬಹುದಾಗಿದೆ. ಸಂಸ್ಕೃತಿ ಮತ್ತು ಸಮಾಜವನ್ನು ಉಳಿಸಲು ಪೂರಕವಾಗುವಂತಹ ಸಣ್ಣ ಪ್ರಯತ್ನದ ಮೂಲಕ ದೊಡ್ಡ ಸಾಧನೆ ಮಾಡಲು ಹೊರಟಿರುವ ಈರಮಂಡ ಹರಿಣಿ ವಿಜಯ್ ಅವರ ಕಾರ್ಯ ಯುವ ಪ್ರತಿಭೆಗಳಿಗೆ ಸ್ಫೂರ್ತಿಯನ್ನು ತುಂಬಲಿದೆ ಎಂದರು.


ಸಾಹಿತಿ ಹಾಗೂ ಮಕ್ಕಳ ತಜ್ಞ ಮೇಜರ್ ಕುಶ್ವಂತ್ ಕೋಳಿಬೈಲು ಮಾತನಾಡಿ, ಕೊಡಗಿನ ಗೌರಮ್ಮ, ತ್ರಿವೇಣಿ, ವೈದೇಹಿ ಸೇರಿದಂತೆ ಅನೇಕ ಮಹಿಳಾ ಕಥೆಗಾರ್ತಿಯರು ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಈರಂಡ ಹರಿಣಿ ವಿಜಯ್ ಅವರು ಭರವಸೆಯ ಬರಹಗಾರ್ತಿಯಾಗಿದ್ದು, ಅಗ್ನಿಯಾತ್ರೆ ಕಾದಂಬರಿಯನ್ನು ಎಲ್ಲರೂ ಓದಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.


ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೬೩ ಕೃತಿಗಳನ್ನು ಕೂಟದ ಮೂಲಕ ಬಿಡುಗಡೆ ಮಾಡಲಾಗಿದೆ. ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಮೂರು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಇದೀಗ ೬೪ ನೇ ಪುಸ್ತಕವಾಗಿ ಅಗ್ನಿಯಾತ್ರೆ ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಸಣ್ಣ ಕಥೆಯಾಗಿ ಆರಂಭಗೊಂಡ ಅಗ್ನಿಯಾತ್ರೆ ೨೭೨ ಪುಟಗಳ ದೊಡ್ಡ ಕಾದಂಬರಿಯಾಗಿ ಮಾರ್ಪಟ್ಟಿದೆ. ಇದು ನನ್ನ ಎರಡನೇ ಪುಸ್ತಕವಾಗಿದ್ದು, ಇದನ್ನು ರಚಿಸಲು ಒಂದೂವರೆ ವರ್ಷ ಬೇಕಾಯಿತು. ಹೆಣ್ಣೊಬ್ಬಳು ತಾನು ಅನುಭವಿಸುವ ಸಂಕಷ್ಟದ ಅಗ್ನಿಯಿಂದ ಹೊರ ಬರಲು ನಡೆಸುವ ಹೋರಾಟದ ಸುತ್ತ ಕಥೆಯನ್ನು ಹೆಣೆಯಲಾಗಿದೆ.
-ಈರಮಂಡ ಹರಿಣಿ ವಿಜಯ್, ಬರಹಗಾರ್ತಿ, ಅಗ್ನಿಯಾತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net