ಆ. 5 ರಿಂದ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ

ATHLETIC
ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ ಆರ್.ಜಾಧವ ಹಾಗೂ ದೇವರಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಪ್ರೊ.ಅಶೋಕ ಎಸ್. ಹೆಗಡೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಇದೇ ಆ. 5 ರಿಂದ ಮೂರು ದಿನಗಳ ಕಾಲ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ 8ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ-2022-23 ಆಯೋಜಿಸಲಾಗಿದೆ.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆ. 5 ರಂದು ಸಂಜೆ 4ಕ್ಕೆ ಕ್ರೀಡಾಕೂಟದ ಉದ್ಘಾಟನೆ ನೆರವೇರಲಿದ್ದು, ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ ಆರ್.ಜಾಧವ ಹಾಗೂ ದೇವರಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಪ್ರೊ.ಅಶೋಕ ಎಸ್. ಹೆಗಡೆ ಬುಧವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರೀಡಾಕೂಟದ ರೂಪುರೇಷೆ

ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನೇತೃತ್ವ ಹಾಗೂ ಜಿಲ್ಲೆಯ ವಿವಿಧ ಕಾಲೇಜ್‌ಗಳ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ವಿವಿ ವ್ಯಾಪ್ತಿಯ ನಾಲ್ಕು ವಲಯಗಳಿಂದ (ಬೆಳಗಾವಿ, ಬಾಗಲಕೋಟ, ವಿಜಯಪುರ ಹಾಗೂ ಚಿಕ್ಕೋಡಿ) ಸುಮಾರು 110-120 ಕಾಲೇಜು ತಂಡಗಳ 700ಕ್ಕೂ ಅಧಿಕ ಪುರುಷ ಹಾಗೂ 300ಕ್ಕೂ ಅದಿಕ ಮಹಿಳಾ ಕ್ರೀಡಾಪಟುಗಳು, 150-200 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ಚಾಂಪಿಯನ್‌ಶಿಪ್ ಮತ್ತು ರನ್ನರ್ ಅಪ್ ತಂಡಗಳಿಗೆ ಹಾಗೂ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳಿಗೆ ಆಕರ್ಷಕ ಟ್ರಾಫಿ, ಮೆಡಲ್, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ಜಾಧವ ವಿವರಿಸಿದರು.

ಅನುದಾನದ ವಿವರ

ಕ್ರೀಡಾಕೂಟ ಸಂಘಟಿಸಲು ಅಂದಾಜು 14-15 ಲಕ್ಷ ರೂ.ಖರ್ಚಾಗಲಿದ್ದು ರಾಣಿ ಚೆನ್ನಮ್ಮ ವಿವಿಯಿಂದ 5.60 ಲಕ್ಷ ರೂ. ಸಿಗಲಿದೆ. ಇನ್ನುಳಿದ ಹಣವನ್ನು ಪ್ರವೇಶ ಫೀ ಹಾಗೂ ದಾನಿಗಳಿಂದ ನೆರವಾಗಿ ಪಡೆದು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ವಿವಿಯಿಂದ 2.80 ಲಕ್ಷ ರೂ.ದೊರೆತಿದೆ. ದಾನಿಗಳಿಂದ ಸುಮಾರು 3 ಲಕ್ಷ ರೂ.ಸಂಗ್ರಹಗೊಂಡಿದೆ. ಕ್ರೀಡಾಕೂಟದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಆತಿಥೇಯ ಮಹಾವಿದ್ಯಾಲಯದ 45 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ ಎಂದರು.

ಉದ್ಘಾಟನೆ ಕಾರ್ಯಕ್ರಮ

ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆ. 5 ರಂದು ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟನೆ ನೆರವೇರಿಸಲಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಚಿವ ಶಿವಾನಂದ ಪಾಟೀಲ ಘನ ಉಪ ಸ್ಥಿತಿ ವಹಿಸಲಿದ್ದು, ಶಾಸಕ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಸ್ಮರಣ ಸಂಚಿಕೆ ಹಾಗೂ ಕ್ರೀಡಾ ಲಾಂಛನ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್. ಪೂಜಾರ, ಅಪ್ಪಾಜಿ ಸಿ.ಎಸ್. ನಾಡಗೌಡ, ವಿಠಲ ದೋಂಡಿಬಾ ಕಟಕಧೋಂಡ, ಅಶೋಕ ಮಲ್ಲಪ್ಪ ಮನಗೂಳಿ ಭಾಗವಹಿಸಲಿದ್ದಾರೆ. ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ವಿಜಯ ನಾಗಣ್ಣವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಎಚ್.ಡಿ. ಆನಂದಕುಮಾರ, ಕುಲಚಿವೆ ರಾಜಶ್ರೀ ಜೈನಾಪುರ ಮತ್ತಿತರರು ಪಾಲ್ಗೊಳ್ಳುವರು ಎಂದು ಪ್ರಾಂಶುಪಾಲ ಪ್ರೊ.ಅಶೋಕ ಎಸ್. ಹೆಗಡೆ ತಿಳಿಸಿದರು.

ಡಾ.ಆರ್.ಎಸ್. ಕಲ್ಲೂರಮಠ, ಎಸ್.ಜಿ. ಮಠ, ಆರ್.ಎಚ್.ರಮೇಶ, ಸುರೇಶ ಡಬ್ಬಿ, ಜಿ.ಎಚ್. ಮಣ್ಣೂರ, ಶಶಿಕಲಾ ಇಜೇರಿ, ಉಷಾ ರಾವ್, ಪುಷ್ಪಾ ಮಹಾಂತಮಠ, ಸುರೇಶ ಬಿಜಾಪುರ, ಫಯಾಜ್ ಕಲಾದಗಿ, ಚಾಂದ ಮುಕಾದಮ, ಆರೀಫ್ ಇನಾಮದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net