ಇಂಟರ್‌ಸಿಟಿ ರೈಲಿನ ಶೌಚಗೃಹದಲ್ಲಿ ಬ್ಯಾಂಕ್‌ ವ್ಯವಸ್ಥಾಪಕನ ಮೃತದೇಹ ಪತ್ತೆ

26 smg ashok choudari
Published on

ಶಿವಮೊಗ್ಗ: ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದ ಪತ್ನಿ ಕರೆತರಲು ಇಂಟರ್‌ಸಿಟಿ ರೈಲಿನಲ್ಲಿ ತೆರಳಿದ್ದ ಬಿ.ಎಚ್.ರಸ್ತೆಯ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ಶನಿವಾರ ಹೃದಯಾಘಾತದಿಂದ ರೈಲಿನ ಎಸಿ ಬೋಗಿಯ ಶೌಚಗೃಹದಲ್ಲೇ ಮೃತಪಟ್ಟಿದ್ದು ಭಾನುವಾರ ಬೆಳಗ್ಗೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಮೃತದೇಹ ಪತ್ತೆಯಾಗಿದೆ.

ಬಿ.ಎಚ್.ರಸ್ತೆಯ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ಅಶೋಕ್ ರೈ ಚೌಧರಿ (35) ಮೃತರು. ಅಸ್ಸಾಂ ಮೂಲದ ಅಶೋಕ್ ರೈ ಚೌಧರಿ ಅವರು ಕಳೆದ ಎರಡು ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದರು. ಅಸ್ಸಾನಿಂದ ಶನಿವಾರ ರಾತ್ರಿ ಅಶೋಕ್ ಚೌಧರಿ ಅವರ ಪತ್ನಿ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದರು. ಹಾಗಾಗಿ ಶನಿವಾರ ಮಧ್ಯಾಹ್ನವೇ ಯಶವಂತಪುರ-ಶಿವಮೊಗ್ಗದ ಇಂಟರ್‌ಸಿಟಿ ರೈಲಿನ ಏಸಿ ಬೋಗಿಯಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು. ಮಾರ್ಗಮಧ್ಯೆ ಶೌಚ ಗೃಹಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶೌಚಗೃಹದ ಒಳಗಡೆಯಿಂದ ಲಾಕ್ ಮಾಡಿದ್ದರಿಂದ ಸಹ ಪ್ರಯಾಣಿಕರು, ರೈಲ್ವೆ ಪೊಲೀಸರು ಮತ್ತು ಸ್ವಚ್ಛತಾ ಸಿಬ್ಬಂದಿ ಗಮನಕ್ಕೆ ಬಂದಿಲ್ಲ. ಕುಟುಂಬಸ್ಥರ ಮೊಬೈಲ್ ಕರೆಗಳನ್ನೂ ಸ್ವೀಕರಿಸಿರಲಿಲ್ಲ. ಹಾಗಾಗಿ ಕುಟುಂಬಸ್ಥರು ಆತಂಕಗೊಂಡಿದ್ದರು. ಭಾನುವಾರ ಬೆಳಗ್ಗೆ ಯಶವಂತರಪುರ-ಶಿವಮೊಗ್ಗ ಇಂಟರ್‌ಸಿಟಿ ರೈಲು ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದು ರೈಲಿನ ಸಿಬ್ಬಂದಿ ಬೋಗಿಯನ್ನು ಸ್ವಚ್ಛಗೊಳಿಸಲು ಮುಂದಾದಗ ಶೌಚಗೃಹ ಒಳಗಡೆಯಿಂದ ಲಾಕ್ ಆಗಿತ್ತು. ಎಷ್ಟೊತ್ತಾದರೂ ಹೊರಗೆ ಬಾರದೇ ಇರುವುದರಿಂದ ಅನುಮಾನಗೊಂಡು ಪೊಲೀಸರ ಸಮ್ಮುಖದಲ್ಲಿ ಲಾಕ್ ತೆರೆದು ನೋಡಿದಾಗ ಅಶೋಕ್ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net