ರಾಷ್ಟ್ರಕ್ಕೆ ಸೇವೆ ನೀಡಲು ಸಿದ್ಧರಾಗಿ: ಏರ್‌ವೈಸ್ ಮಾರ್ಷಲ್ ಕೆ.ಎನ್.ಸಂತೋಷ್ ಕರೆ

Interaction With Student mandya
Published on

ಮಂಡ್ಯ: ವ್ಯಾಸಂಗ ಮುಗಿದ ಬಳಿಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದು ಇಂಡಿಯನ್ ಏರ್‌ಫೋರ್ಸ್‌ನ ಏರ್‌ವೈಸ್ ಮಾರ್ಷಲ್ ಆದ ಹಿರಿಯ ವಿದ್ಯಾರ್ಥಿ ಕೆ.ಎನ್.ಸಂತೋಷ್ ಕರೆ ನೀಡಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಬೇಕು. ಇದರಿಂದ ಮಿದುಳಿನ ಆರೋಗ್ಯ ಸುಧಾರಿಸುತ್ತದೆ. ಜತೆಗೆ ದೈನಂದಿನ ಚಟುವಟಿಕೆಗಳನ್ನು ಮಾಡುವ ಸಾಮರ್ಥ್ಯ ಬೆಳೆಯುತ್ತದೆ. ಅಂತೆಯೇ ವ್ಯಾಸಂಗದ ಬಳಿಕ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವತ್ತಾ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.

ಭಾರತೀಯ ವಾಯುಪಡೆ ಮತ್ತು ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಪಾತ್ರದ ಒಳನೋಟದ ಪರಿಚಯ ಮಾಡಿದ ಕೆ.ಎನ್.ಸಂತೋಷ್, ವಿದ್ಯಾರ್ಥಿಗಳೊಂದಿಗೆ ಸಂವಾದ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕೆ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಇಂಡಿಯನ್ ಏರ್‌ಫೋರ್ಸ್‌ನ ಏರ್‌ವೈಸ್ ಮಾರ್ಷಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ಅವರು ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ. ಅವರು ಮಾತುಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ನಾಗರತ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net