

ಕುಶಾಲನಗರ: ಭವಿಷ್ಯದ ಸೇನಾ ನಾಯಕರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಕಾರವಾರ ಸೀಬರ್ಡ್ ನೌಕಾನೆಲೆಯ 13 ಅಧಿಕಾರಿಗಳ ತಂಡ ಕೂಡಿಗೆಯ ಸೈನಿಕ ಶಾಲೆಗೆ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿತು.
ಶಾಲೆಗೆ ಆಗಮಿಸಿದ ಲೆಫ್ಟಿನೆಂಟ್ ಕಮಾಂಡರ್ ಜೆ.ಸುಬ್ಬಯ್ಯ ನೇತೃತ್ವದ ಅಧಿಕಾರಿಗಳು, ಭಾರತೀಯ ನೌಕಾ ಇಲಾಖೆಯಲ್ಲಿ ಅಧಿಕಾರಿಗಳಾಗಿ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಈ ಭೇಟಿಯು ‘ಕರ್ನಾಟಕ ಪರಂಪರೆಯ ರ‌್ಯಾಲಿ’ಯ ಭಾಗವಾಗಿದ್ದು, ಇದು ಭಾರತೀಯ ನೌಕಾ ಸೇನೆಯನ್ನು ಪ್ರಚುರಪಡಿಸುವ ಮತ್ತು ಭಾರತೀಯ ನೌಕಾಪಡೆಯ ಶ್ರೀಮಂತ ಇತಿಹಾಸ ಪರಿಚಯಿಸುವ ಗುರಿ ಹೊಂದಿದೆ. 1961ರಲ್ಲಿ ಅಂಜದೀವ್ ದ್ವೀಪವನ್ನು ವಶಪಡಿಸಿಕೊಂಡದ್ದು ಹಾಗೂ 1971ರ ಯುದ್ಧದ ಸಂದರ್ಭದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಪ್ರಾಮುಖ್ಯ ಸಾರುವುದಾಗಿತ್ತು. ಈ ಘಟನೆಯು ರಾಷ್ಟ್ರದ ನೌಕಾ ಸೇನೆಯ ಪರಂಪರೆಯಲ್ಲಿ ಹೆಮ್ಮೆಯ ಮೈಲಿಗಲ್ಲನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಲೆಫ್ಟಿನೆಂಟ್ ಕಮಾಂಡರ್ ಜೆ.ಸುಬ್ಬಯ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ವಿದ್ಯಾಭ್ಯಾಸ ಮತ್ತು ಕರ್ತವ್ಯಕ್ಕೆ ಬದ್ಧರಾಗಿ ಭವಿಷ್ಯವನ್ನು ಭಾರತೀಯ ಸೇನೆಯಲ್ಲಿ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಕಮಾಂಡರ್ ಸಜ್ಜಾನ್ ಕೋಕಿಲಾ ಅವರು ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಗಳಾಗಿ ಸೇರಲು ಮಹಿಳೆಯರಿಗೆ ಲಭ್ಯವಿರುವ ಹೆಚ್ಚಿನ ಅವಕಾಶಗಳ ಕುರಿತು ಮಾತನಾಡಿದರು.
ಸೈನಿಕ ಶಾಲೆಯ ಕೊಡಗಿನ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಭವಿಷ್ಯ ರೂಪಿಸುವಲ್ಲಿ ಇಂತಹ ಸಂವಾದಗಳು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸೈನಿಕ ಶಾಲೆ ಕೊಡಗಿನ ಅತಿ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ಸೇನೆ, ನೌಕಾಸೇನೆ ಮತ್ತು ವಾಯುಸೇನೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ಶ್ಲಾಘಿಸಿದರು.