ನೀರು, ವಿದ್ಯುತ್ ಕೊಡದೇ ಅನ್ಯಾಯ: ಸಂವಾದದಲ್ಲಿ ರಾಜ್ಯಸರ್ಕಾರದ ವಿರುದ್ಧ ರೈತರ ಆಕ್ರೋಶ

Interaction with farmers in Hullukere village mandya
Published on

ಮಂಡ್ಯ: ರೈತರಿಗೆ ಅನುಕೂಲ ಮಾಡುತ್ತೇವೆಂದು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಜಿಲ್ಲೆಯ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಅತ್ತ ತ್ರೀ ಫೇಸ್ ವಿದ್ಯುತ್ ಅನ್ನು ಸರಿಯಾಗಿ ಕೊಡದೇ ಅನ್ಯಾಯ ಮಾಡುತ್ತಿದೆ.

ಇದು ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎ.ಹುಲ್ಲುಕೆರೆ ಗ್ರಾಮದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ರೈತರ ಬೇಸರದ ನುಡಿ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹವೂ ಕ್ಷೀಣಿಸುತ್ತಿದೆ. ಹೀಗಿರುವಾಗ ರಾಜ್ಯಸರ್ಕಾರ ತ.ನಾಡಿಗೆ ನೀರು ಹರಿಸುತ್ತಿದೆ. ಈ ಬಗ್ಗೆ ನಿರಂತರ ಹೋರಾಟ ನಡೆಯುತ್ತಿದ್ದರೂ ಕನಿಷ್ಟ ಗೌರವ ನೀಡುತ್ತಿಲ್ಲ. ಮಾತ್ರವಲ್ಲದೆ ಪಂಪ್‌ಸೆಟ್‌ಗಳಿಗೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಬೆಳೆ ಒಣಗಲಾರಂಭಿಸಿದೆ. ಇನ್ನು ವಿದ್ಯುತ್ ಕೊಡದಿರುವ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ತಾತ್ಸಾರದಿಂದ ಮಾತನಾಡುತ್ತಾರೆ. ಹೀಗಾದರೆ ರೈತರು ಬದುಕು ನಡೆಸುವುದಾದರೂ ಹೇಗೆ?. ಆದ್ದರಿಂದ ರಾಜ್ಯಸರ್ಕಾರದ ಧೋರಣೆ ವಿರುದ್ಧ ಹಾಗೂ ರೈತರ ಪರವಾಗಿ ಬಿಜೆಪಿ ಹೋರಾಟ ಮಾಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಯುವ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ.ಎನ್.ಎಸ್.ಇಂದ್ರೇಶ್, ಟಿ.ಶ್ರೀಧರ್ ಇತರರಿದ್ದರು.

ಜಮೀನು ಕೆಲಸವನ್ನು ನರೇಗಾಗೆ ಸೇರಿಸಿ: ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಕೃಷಿಗೆ ಸಂಬಂಧಿಸಿದಂತೆ ಹಲವು ವಿಷಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅದರಂತೆ ಪ್ರಮುಖವಾಗಿ ಜಮೀನು ಕೆಲಸಕ್ಕೆ ಕೂಲಿಯಾಳು ಸಮಸ್ಯೆಯಾಗಿರುವ ಬಗ್ಗೆ ಗಮನಸೆಳೆದರು. ನರೇಗಾ ಯೋಜನೆಯಡಿ ಕೆಲಸದ ಜತೆಗೆ ಸರಿಯಾಗಿ ವೇತನ ನೀಡುತ್ತಿರುವುದರಿಂದ ಜಮೀನಿನಲ್ಲಿ ಮಾಡುವ ಕೆಲಸಕ್ಕೆ ಜನರು ಸಿಗುತ್ತಿಲ್ಲ. ಇದರಿಂದಾಗಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಜಮೀನಿನಲ್ಲಿ ಮಾಡುವ ಕೆಲಸವನ್ನೂ ನರೇಗಾ ಯೋಜನೆಗೆ ಒಳಪಡಿಸಿದರೆ ಅನುಕೂಲವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರದ ಗಮನಸೆಳೆಯುವಂತೆ ಮನವಿ ಮಾಡಿದರು.

ಅಂತೆಯೇ ಐದು ಗುಂಟೆಗಿಂತ ಕಡಿಮೆ ಜಮೀನು ಮಾರಾಟವನ್ನು ಸರಳೀಕರಣಗೊಳಿಸುವುದು, ಫೋಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಾಗಬೇಕು ಎಂದು ಸಲಹೆ ನೀಡಿದ ರೈತರು, ಕೃಷಿಸಮ್ಮಾನ್ ಯೋಜನೆಯಡಿ ರಾಜ್ಯಸರ್ಕಾರದಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸುವುದು. ರೈತರ ಮಕ್ಕಳಿಗೆ ಕೊಡಲಾಗುತ್ತಿದ್ದ ವಿದ್ಯಾಸಿರಿ ಯೋಜನೆ ಸ್ಥಗಿತಗೊಳಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net