ರೈತರಿಗೆ ಕಾಂಗ್ರೆಸ್‌ನಿಂದ ದ್ರೋಹ: ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ

Former Minister Dr. C. N. Aswatthanarayan
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮಹತ್ವದ ಯೋಜನೆಗಳನ್ನು ಏಕಾಏಕಿ ಸ್ಥಗಿತಗೊಳಿಸಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ತಾಲೂಕಿನ ಎ.ಹುಲ್ಲುಕೆರೆ ಗ್ರಾಮದಲ್ಲಿ ರೈತರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ನೀಡಲು ಜನರು ಹಾಗೂ ರೈತರಿಗೆ ಅನುಕೂಲವಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ. ಕೃಷಿಗೆ ನೀಡಲಾಗುತ್ತಿದ್ದ ಅನುದಾನವನ್ನು ಮೊದಲ ಬಜೆಟ್‌ನಲ್ಲೇ ಶೇ.50ರಷ್ಟು ಕಡಿಮೆ ಮಾಡಿತು. ಕೃಷಿ ಸಮ್ಮಾನ್, ವಿದ್ಯಾಸಿರಿ ಯೋಜನೆಯನ್ನು ಕೈಬಿಡಲಾಗಿದೆ. ಈ ನಡುವೆ ರಾಜ್ಯದ ರೈತರಿಗೆ ಕತ್ತಲು ಭಾಗ್ಯ ಕೊಟ್ಟಿದೆ. ನಮ್ಮ ಸರ್ಕಾರ 4 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡುತ್ತಿತ್ತು. ಈಗ ಬರೀ 2 ಗಂಟೆ ಕೊಡಲಾಗುತ್ತಿದೆ. ಉಚಿತ ವಿದ್ಯುತ್ ಪೂರೈಕೆ ಎಂದು ಗ್ಯಾರಂಟಿ ಕೊಟ್ಟಿದ್ದರು. ಆದರೆ ರೈತರಿಗೆ ಕತ್ತಲುಭಾಗ್ಯ ಕೊಟ್ಟು ಅಧಿಕಾರದ ಅಮಲಿನಲ್ಲಿದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟು ಜನರನ್ನ ಸಂಕಷ್ಟದ ಸ್ಥಿತಿಗೆ ಸಿಲುಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ರೈತರನ್ನ ಉದ್ದಾರ ಮಾಡಲ್ಲ ಎಂದು ಟೀಕಿಸಿದರು.

ಕಾವೇರಿ ನೀರಿನ ವಿವಾದದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆನಷ್ಟದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮಾತ್ರವಲ್ಲದೆ ಬರಗಾಲವಿರುವುದರಿಂದ ಬೆಳೆ ಸಾಲ ಸಂಪೂರ್ಣ ಮನ್ನಾವಾಗಬೇಕು. ಜತೆಗೆ ಎಲ್ಲ ಸೌಲಭ್ಯ ಅವರಿಗೆ ಸಿಗುವ ಮೂಲಕ ಗ್ರಾಮೀಣ ಭಾಗ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಂವಾದದಲ್ಲಿ ರೈತರು ಹಲವು ಸಲಹೆ ಹಾಗೂ ಸಮಸ್ಯೆಯನ್ನು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಅಂತೆಯೇ ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net