

ಕೊಪ್ಪಳ: ಗ್ರಾಮೀಣ ಜನರ ಅನುಕೂಲಕ್ಕೆಂದು ನರೇಗಾ ಕಾಮಗಾರಿ ಆರಂಭಿಸಿದ್ದು, ಕೂಲಿಕಾರರು ಪರಸ್ಪರ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕೆಂದು ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಹೇಳಿದರು. ತಾಲೂಕಿನ ಕುಣಿಕೇರಿ ಗ್ರಾಮದ ಚಿಕ್ಕ ಕೆರೆ ಹೂಳೆತ್ತುವ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ಕಾರಣದಿಂದ ಕಳೆದೊಂದು ತಿಂಗಳಿನಿಂದ ನರೇಗಾದನ್ವಯ ಕಾಮಗಾರಿ ಆರಂಭಿಸಿರಲಿಲ್ಲ. ಸದ್ಯ ಕೂಲಿಕಾರರಿಗೆ ಅನುಕೂಲವಾಗಲೆಂದು ಕಾಮಗಾರಿ ಆರಂಭಿಸಲಾಗಿದೆ. ನೀವೆಲ್ಲ ಕೆಲಸ ಮಾಡುವಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ದಿನಕ್ಕೆ 275ರೂ. ಕೂಲಿಹಣ ಪಾವತಿಸಲಾಗುವುದು ಕಾಯಕ ಬಂಧುಗಳು ಕೂಲಿಕಾರರ ಸರಿಯಾದ ಮಾಹಿತಿ ನೀಡುವುದು, ಕೆಲಸ ಹಂಚಿಕೆ, ಕುಡಿವ ನೀರಿನ ವ್ಯವಸ್ಥೆ ಮುಂತಾದವುಗಳ ಬಗ್ಗೆ ಉಸ್ತುವಾರಿ ನೋಡಿಕೊಳ್ಳಬೇಕು. ನಗರ ಪ್ರದೇಶದಿಂದ ಸ್ವಗ್ರಾಮಕ್ಕೆ ಮರಳಿದ ಕೂಲಿಕಾರರಿಗೆ ಸಹ ನರೇಗಾದಡಿ ಜಾಬ್ ಕಾರ್ಡ್ ನೀಡಿ ಕೆಲಸ ನೀಡಲಾಗುತ್ತಿದೆ. ಎಲ್ಲರೂ ಈ ಅವಕಾಶದ ಸದ್ಬಳಕೆ ಮಾಡಿಕೊಂಡು ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಕೂಲಿಕಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪಿಡಿಒ ಕೆ.ವಾಗೀಶ್, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಕಾರ್ಯದರ್ಶಿ ನಿಂಗನಗೌಡ, ಕಾಯಕ ಬಂಧು ಶಿವಾನಂದಯ್ಯ, ಕೂಲಿಕಾರರು ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.