

ಮಂಡ್ಯ: ಉದ್ಯಮಿದಲ್ಲಿ ಯಶಸ್ವಿ ಕಾಣಲು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ದೃಢ ನಿರ್ಣಯ ಮುಖ್ಯವಾಗುತ್ತದೆ ಎಂದು ಗೀಕ್ಸ್ ಫಾರ್ ಗೀಕ್ಸ್ ಸಂಸ್ಥೆಯ ಸಂಸ್ಥಾಪಕ ಸಂದೀಪ್ ಜೈನ್ ಹೇಳಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದಿಂದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ಆಂಡ್ರಾಯ್ಡಾ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪರಿಣತಿ ಹೊಂದಬೇಕು. ಈ ಕ್ಷೇತ್ರಗಳಲ್ಲಿ ಕೌಶಲ ಹೊಂದಿರುವ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಲು, ಭವಿಷ್ಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಕೆಲವು ಪ್ರಮುಖ ಸಲಹೆ ನೀಡಿದರು. ಅಂತೆಯೇ ತಮ್ಮ ಕಾಲೇಜು ದಿನಗಳಿಂದ ಉದ್ಯಮ ಪ್ರಾರಂಭಿಸುವವರೆಗಿನ ಅನುಭವ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ನನಸಾಗಿಸಲು ಮತ್ತು ತಮ್ಮ ಆಯ್ಕೆಯ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಅಗತ್ಯವಾದ ಮಾರ್ಗದರ್ಶನ ಮತ್ತು ಬೆಂಬಲ ನೀಡಿದರು.