

ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಎಚ್.ಕೆಂಪೇಗೌಡ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಅಂತರ ರಾಜ್ಯ ವಿಟಿಯು ಕುಸ್ತಿ ಮತ್ತು ಜೂಡೋ ಪಂದ್ಯಾವಳಿ’ ಬುಧವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಪಂದ್ಯಾವಳಿಯಲ್ಲಿ ರಾಜ್ಯದ 42 ಇಂಜಿನಿಯರಿಂಗ್ ಕಾಲೇಜುಗಳಿಂದ 300ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಪುರುಷರ ಜೂಡೋ ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ನ್ಯೂ ಹೊರೈಜನ್ ಕಾಲೇಜು ಪಡೆದುಕೊಂಡಿತು.
ಕುಸ್ತಿ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದರೆ ಜೂಡೋ ವಿಭಾಗದ ಮಹಿಳಾ ವಿಭಾಗದಲ್ಲಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜು ಪಡೆದುಕೊಂಡಿತು.
ನಗರದ ವಿವಿಸಿ ಕಾಲೇಜಿನ ಮೊಹಮ್ಮದ್ ಓಮರ್ 79 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಆರ್.ಯತೀಶ್ ಹಾಗೂ ಕಿರಣ್ ಗೌಡ ಕ್ರಮವಾಗಿ 65 ಕೆಜಿ ಹಾಗೂ 70 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮೂಡಿಗೇರಿಸಿಕೊಂಡರು.
ಪುರುಷರ ಜೂಡೋ ಸಮಗ್ರ ಪ್ರಶಸ್ತಿಯಲ್ಲಿ ಮಹಾರಾಜ ಇಂಜಿನಿಯರಿಂಗ್ ಕಾಲೇಜು ರನ್ನರ್ ಪ್ರಶಸ್ತಿ ಪಡೆಯಿತು.