ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಡುಬಿದ್ರಿ ಬಂಟರ ಸಂಘದ ವತಿಯಿಂದ ಅಂತಾರಾಜ್ಯ ಬಂಟ ಕ್ರೀಡೋತ್ಸವ ಎಂಆರ್‌ಜಿ ಟ್ರೋಫಿ-2024 ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಬಂಟರ ಭವನ ಸಮೀಪದ ರಮೇಶ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಡಿ.29ರಂದು ನಡೆಯಲಿದೆ ಎಂದು ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿವೆ. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು ಎಂದರು.
ದಾನಿ ಎಂಆರ್‌ಜೆ ಗ್ರೂಪ್‌ನ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ಪ್ರಾಯೋಜಕತ್ವದ ಕ್ರೀಡೋತ್ಸವವನ್ನು ಬೆಳಗ್ಗೆ 9.30ಕ್ಕೆ ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸುವರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಕ್ರೀಡಾಜ್ಯೋತಿ ಪ್ರಜ್ವಲನ. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪಥ ಸಂಚಲನ ಗೌರವ ರಕ್ಷೆ ಸ್ವೀಕರಿಸುವರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಬಂಟ ಸಾಧಕ ಪ್ರಶಸ್ತಿ ನೀಡಿ ಗೌರವಿಸುವರು. ಅದಾನಿ ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದು, ಕೆ.ಎಂ.ಶೆಟ್ಟಿ ವಾಲಿಬಾಲ್ ಕ್ರೀಡಾಂಗಣ, ಪ್ರವೀಣ್ ಭೋಜ ಶೆಟ್ಟಿ ಹಗ್ಗ ಜಗ್ಗಾಟ ಕ್ರೀಡಾಂಗಣ, ಚಂದ್ರಹಾಸ ಶೆಟ್ಟಿ ಪುಚ್ಚೊಟ್ಟು ಬೀಡು ಕಬಡ್ಡಿ ಕ್ರೀಡಾಂಗಣ, ಉಮಾಕೃಷ್ಣ ಶೆಟ್ಟಿ ಥ್ರೋಬಾಲ್ ಕ್ರೀಡಾಂಗಣ ಉದ್ಘಾಟಿಸುವರು ಎಂದರು.
ವೈಭವದ ಕ್ರೀಡಾಜ್ಯೋತಿ ಮೆರವಣಿಗೆ: ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಆಕರ್ಷಕ ವಾಹನ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿ ಪಡುಬಿದ್ರಿ ಪೇಟೆಯ ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬರಲಿದೆ. ಪುಣೆ ಉದ್ಯಮಿ ಸೀತಾರಾಮ ಶೆಟ್ಟಿ ಪುಚ್ಚೊಟ್ಟು ಬೀಡು ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡುವರು. ಮಾತೃ ಬಂಟರ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ಭಾಗವಹಿಸುವರು. ಕ್ರೀಡಾಕೂಟದ ಪ್ರಾಯೋಜಕ ಕೆ.ಪ್ರಕಾಶ್ ಶೆಟ್ಟಿ ಸಮಾರೋಪದಲ್ಲಿ ಬಹುಮಾನ ವಿತರಿಸಲಿದ್ದು, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾರೋಪ ಭಾಷಣ ಮಾಡುವರು.
ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರಧಾನ: ಅಂತಾರಾಷ್ಟ್ರೀಯ ಕ್ರೀಡಾಪಟು ಎರ್ಮಾಳು ರೋಹಿತ್ ಹೆಗ್ಡೆ, ಕಂಬಳ ಕ್ಷೇತ್ರದ ಸಾಧಕ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ, ಅಂತಾರಾಷ್ಟ್ರೀಯ ಈಜುಪಟು ನೈಶಾ ಶೆಟ್ಟಿ ಅವರಿಗೆ ತೋನ್ಸೆ ಆನಂದ ಶೆಟ್ಟಿ ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರಧಾನಿಸುವರು.
ಪ್ರೋತ್ಸಾಹಧನ ವಿತರಣೆ: ಬಂಟ ಸಮಾಜದ ಕ್ರೀಡಾಳುಗಳಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರೋತ್ಸಾಹಧನ, ಪಥ ಸಂಚಲನಾ ಸ್ಪರ್ಧಾ ವಿಜೇತರಿಗೆ ಜಿ.ಶಂಕರ್ ಬಹುಮಾನ ವಿತರಿಸಲಿರುವರು. ಕೆ.ಪ್ರಕಾಶ್ ಶೆಟ್ಟಿ, ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಕರುಣಾಕರ ಪೂಜಾರಿ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು. ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಹಾಗೂ ಸ್ಥಳೀಯ ಚಿತ್ರ ನಟರು ಭಾಗವಹಿಸಿ ಕಾರ್ಯಕ್ರಮದ ಆಕರ್ಷಣೆ ಹೆಚ್ಚಿಸಲಿದ್ದಾರೆ. ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಅಮ್ಮು ಆಮುಂಡರಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಬಂಟ್ಸ್ ವೆಲ್ಪೇರ್ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ವಿನಯ್ ಶೆಟ್ಟಿ, ಸಹಸಂಚಾಲಕಿ ಶರ್ಮಿಳಾ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಕ್ರೀಡಾ ಕೂಟದ ಉಸ್ತುವಾರಿ ರಿತೇಶ್ ಕುಮಾರ್ ಶೆಟ್ಟಿ, ಪ್ರಮುಖರಾದ ಜಯ ಶೆಟ್ಟಿ, ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.