ಅಂತರ ವಲಯ ಯುವಜನೋತ್ಸವ ಸಮಾರೋಪ

New law
Published on

ಹುಬ್ಬಳ್ಳಿ : ದೇಶದ ಐಕ್ಯತೆ, ಸಾಮರಸ್ಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಅಗತ್ಯವಿದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಭಾವನೆಯನ್ನು ಹೊಂದಬೇಕು. ಭಾರತದ ಸಂವಿಧಾನದಿಂದಾಗಿ ಎಲ್ಲರೂ ಗೌರವಯುತ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ಕಾನೂನುಗಳ ತಾಯಿ ಭಾರತದ ಸಂವಿಧಾನವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಹೇಳಿದರು.

ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ವಲಯ ಯುವಜನೋತ್ಸವ 2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾವಲಂಬಿ ದಿಶೆಯಲ್ಲಿ ಹೊಸ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ದೇಶವನ್ನು ಕಟ್ಟುವಲ್ಲಿ ತಮ್ಮದೇ ಕೊಡುಗೆ ನೀಡಬೇಕಿದೆ. ಪ್ರತಿಯೊಬ್ಬರು ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗಿದೆ. ಕಾನೂನು ವಿದ್ಯಾರ್ಥಿಗಳು ನ್ಯಾಯವನ್ನು ನೀಡುವ ನ್ಯಾಯಾಧೀಶರಾಗಬೇಕು ಎಂದರು.

ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿ, ಮೂಲ ಜನಪದ ಕಲೆ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳು ತಿಳಿಯಬೇಕು. ಮೂಲ ಜನಪದ ಎಂದರೆ ಪರಂಪರೆಯಿಂದ ಬಂದಿದ್ದು. ಜನಪದ ಹಾಡುಗಳು ಬಾಯಿಂದ ಬಾಯಿಗೆ, ಜನರಿಂದ ಜನರಿಗೆ, ಜನಾಂಗದಿಂದ ಜನಾಂಗಕ್ಕೆ ಹಾಡಿಕೊಂಡು ಬಂದಿವೆ ಎಂದು ತಿಳಿಸಿದರು.

ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಜನಪದಕ್ಕೆ ಕೊನೆ ಎಂಬುದು ಇಲ್ಲ. ಸಾಂಸ್ಕೃತಿಕ ಲೋಕ, ಜನಪದ ಕಲೆ, ಸಾಹಿತ್ಯ ಎಲ್ಲವೂ ಒಂದೇ. ಸಮಾಜದಲ್ಲಿ ಸಾಮರಸ್ಯ ಬದುಕು ಸಾಗಿಸಲು ಜನಪದ ಕಾರಣವಾಗಿದೆ. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಜೀವನದಲ್ಲಿ ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತ. ಜನಪದ ಕಲೆ ನಶಿಸುತ್ತಿದೆ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಅವನತಿ ಹೊಂದುತ್ತಿದೆ. ಸಂಸ್ಕೃತಿ, ಸಂಸ್ಕಾರಗಳು ಉಳಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಕಾನೂನು ವಿವಿ ಮೌಲ್ಯಮಾಪನ ಕುಲಸಚಿವರಾದ ಡಾ. ರತ್ನಾ ಭರಮಗೌಡರ, ವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಎಚ್.ವಿ.ಬೆಳಗಲಿ, ಮೋಹನ ಭಜಂತ್ರಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಗಿರೀಶ ಕೆ.ಸಿ. ಹಾಗೂ ಇತರರು ಭಾಗವಹಿಸಿದ್ದರು. ವಿವಿ ಕುಲಸಚಿವರಾದ ಅನುರಾಧಾ ವಸ್ತ್ರದ ಸ್ವಾಗತಿಸಿದರು. ಪ್ರಾಧ್ಯಾಪಕ ರಾಜೇಂದ್ರಕುಮಾರ ಹಿಟ್ಟಣಗಿ ಪರಿಚಯಿಸಿದರು. ನಂದಿತಾ ಪಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net