ಅಂತರ್ ಜಿಲ್ಲಾ ಪ್ರಯಾಣ ಅನುಮತಿ ಶೀಘ್ರ

kota srinivas poojary
Published on

ಮಂಗಳೂರು: ಲಾಕ್‌ಡೌನ್‌ನಿಂದ ತಮ್ಮ ಕುಟುಂಬ ಸೇರಲಾಗದೆ ಬಾಕಿಯಾಗಿರುವವರಿಗೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ನೀಡುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್ 19 ಮುಂಜಾಗ್ರತಾ ಕ್ರಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕೈಗೊಳ್ಳುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ದ.ಕ ಜಿಲ್ಲೆಯ ತಾಲೂಕು ಕೇಂದ್ರಗಳಿಂದಲೂ ವಲಸೆ ಕಾರ್ಮಿಕರು ತಮ್ಮ ಜಿಲ್ಲೆಗೆ ತೆರಳಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮಂಗಳೂರು ಹೊರತುಪಡಿಸಿ ಉಳಿದ ತಾಲೂಕುಗಳಿಂದ ವಲಸೆ ಕಾರ್ಮಿಕರನ್ನು ಕಳುಹಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. 4 ಸಾವಿರ ಮಂದಿ ಊರಿಗೆ ತೆರಳಿದ್ದಾರೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಇನ್ನು 3-4 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಲಾಕ್‌ಡೌನ್‌ನಿಂದ ಉಳಿದುಕೊಂಡು, ಬೇರೆ ಜಿಲ್ಲೆಯಲ್ಲಿರುವ ಕುಟುಂಬವನ್ನು ಸೇರಲಾಗದವರಿಗೆ ಮುಂದಿನ ಹಂತದಲ್ಲಿ ಆದ್ಯತೆ ನೀಡಲಾಗುವುದು. ಇದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.

ವಿದೇಶದಲ್ಲಿರುವ ಜಿಲ್ಲೆಯ ನಾಗರಿಕರನ್ನು ಇಲ್ಲಿಗೆ ಕರೆತರುವ ಬಗ್ಗೆ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ತಿಳಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಎಸ್.ಅಂಗಾರ, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್, ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಉಪಸ್ಥಿತರಿದ್ದರು.

ಶಾಸಕರ ನಡುವೆ ಮಾತಿನ ಚಕಮಕಿ ಮಂಗಳೂರು: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮತ್ತು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕರೊನಾದಿಂದ ಮೃತಪಟ್ಟವರ ಶವದೊಂದಿದೆ ಅಲೆದಾಡುವಂತೆ ಮಾಡಲಾಗಿತ್ತು ಎಂದು ಕಾಂಗ್ರೆಸ್ ಶಾಸಕರು ಹೇಳಿದಾಗ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ಶವ ವೆನ್ಲಾಕ್ ಆಸ್ಪತ್ರೆಯಲ್ಲೇ ಇತ್ತು. ಪಚ್ಚನಾಡಿಯಲ್ಲಿ ಶವಸಂಸ್ಕಾರದ ಬಗ್ಗೆ ಚರ್ಚೆಯಷ್ಟೇ ನಡೆದಿತ್ತು ಎಂದು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದರು. ಶಾಸಕ ಖಾದರ್ ತಮ್ಮ ವಾಹನದಲ್ಲಿ ಇತರ ಜಿಲ್ಲೆಯ ಜನರನ್ನು ಸಾಗಾಟ ಮಾಡುತ್ತಿದ್ದಾರೆ. ಇಟಲಿಯಿಂದ ಬಂದವರನ್ನು ಜಿಲ್ಲೆಗೆ ಕರೆ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಕುಟುಕಿದಾಗ, ಬಿಜೆಪಿ ಶಾಸಕರು ಕೂಡ ತಮ್ಮ ವಾಹನದಲ್ಲಿ ಜನ ಸಾಗಾಟ ಮಾಡಿದ್ದಾರೆ ಎಂದು ಖಾದರ್ ಪ್ರತ್ಯಾರೋಪ ಮಾಡಿದರು. ಸಭೆಯಲ್ಲಿ ಅನಗತ್ಯ ವಿಷಯಗಳ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯಿತು.

ಕೋವಿಡ್‌ನಿಂದ ಮೃತಪಟ್ಟವರನ್ನು ಮಂಗಳೂರಿನ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧ ರಿಸಲಾಗಿದೆ. ಈ ಬಗ್ಗೆ ಗೊಂದಲ ಬೇಡ. ಸಾಮಾನ್ಯ ರೋಗಿಗಗಳಿಗೆ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸರ್ಕಾರ ಸೂಚನೆ ನೀಡಲಿದೆ. - ಕೋಟ ಶ್ರೀನಿವಾಸ ಪೂಜಾರಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net