

ಹೊಸದುರ್ಗ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಾಹಿತ್ಯ ಜಂಟಿ ಸಮ್ಮೇಳನ ಸಾಣೇಹಳ್ಳಿಯಲ್ಲಿ ಡಿ.30, 31ರಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ಕಸಪಾ ಪದಾಧಿಕಾರಿಗಳ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಎರಡು ಜಿಲ್ಲೆ ಒಗ್ಗೂಡಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಮೊದಲ ಪ್ರಯತ್ನವಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ತನ್ನದೆ ಅದ ಹಿರಿಮೆ-ಗಿರಿಮೆಗಳಿವೆ. ಸಮ್ಮೇಳನಗಳನ್ನು ಆಯೋಜಿಸುವಾಗ ಸಣ್ಣ-ಪುಟ್ಟ ಸಮಸ್ಯೆಗಳಾಗುವುದು ಸಹಜ. ಅದನ್ನೆ ದೊಡ್ಡ ಪ್ರಮಾಣದಲ್ಲಿ ವಿಮರ್ಶೆ ಮಾಡುವುದು ಸರಿಯಲ್ಲ ಎಂದರು.
ಸಾಣೇಹಳ್ಳಿ ಮಠದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕ ಎಂದು ಹೇಳಿದರು.
ಅತಿಥಿಗಳಿಗೆ ಪ್ಲಾಸ್ಟಿಕ್ ಹಾರ, ಶಾಲು ಹಾಗೂ ಸ್ಮರಣಿಕೆಗಳನ್ನು ನೀಡುವ ಪದ್ಧತಿ ಬಿಡಬೇಕು. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಬದಲಾಗಿ ಖಾದಿಯ ಟವಲ್‌ಗಳನ್ನು ನೀಡಬಹುದು ಎಂದರು.
ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಮ್ಮೇಳನ ಆಯೋಜನೆಗೆ ರಾಜ್ಯ ಸಮಿತಿಯಿಂದ ಒಪ್ಪಿಗೆ ಪಡೆಯಲಾಗಿದ್ದು, ಹಣಕಾಸಿನ ನೆರವು ನೀಡುವಂತೆ ಕೋರಲಾಗಿದೆ. ಶೀಘ್ರದಲ್ಲಿಯೆ ಸಮ್ಮೇಳನ ನಿರ್ವಹಣೆ ಸಂಬಂಧ ಸಿದ್ಧತೆ ಅರಂಭಿಸಲಾಗುವುದು . ಸಮ್ಮೇಳನದ ನೆನಪಿಗಾಗಿ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ಗೌ.ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಸಂಘಟನಾ ಕಾರ್ಯದರ್ಶಿ ವಿ.ಶ್ರೀನಿವಾಸ, ಹೊಳಲ್ಕೆರೆ ತಾಲೂಕಾಧ್ಯಕ್ಷ ಶಿವಮೂರ್ತಿ, ಹೊಸದುರ್ಗ ತಾಲೂಕಾಧ್ಯಕ್ಷ ಓಂಕಾರಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಚಿಕ್ಕಮಗಳೂರು ಜಿಲ್ಲಾ ಗೌ.ಕಾರ್ಯದರ್ಶಿ ಜಿ.ಬಿ.ಪವನ್, ತಾಲೂಕಾಧ್ಯಕ್ಷ ಬಿ.ಎಚ್.ಸೋಮಶೇಖರ್, ಕಡೂರು ತಾಲೂಕಾಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ತರೀಕೆರೆ ತಾಲೂಕಾಧ್ಯಕ್ಷ ನವೀನ್ ಪೆನ್ನಯ್ಯ, ನರಸಿಂಹರಾಜಪುರ ತಾಲೂಕಾಧ್ಯಕ್ಷ ಎಚ್.ಎಸ್.ಪೂರ್ಣೇಶ್, ಮೂಡಿಗೆರೆ ತಾಲೂಕಾಧ್ಯಕ್ಷ ಶಾಂತಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಗೌ.ಕಾರ್ಯದರ್ಶಿ ರೂಪಾನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ರಚನೆ: ಸಮ್ಮೇಳದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಚಿಕ್ಕಮಗಳೂರು ಕಸಪಾ ಸದಸ್ಯ ಎ.ಸಿ.ಚಂದ್ರಣ್ಣ, ಕೋಶಾದ್ಯಕ್ಷರಾಗಿ ಚಿತ್ರದುರ್ಗ ಕಸಾಪ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಅವರನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.
ಅರ್ಥಪೂರ್ಣ, ಸರಳತೆ ಆದ್ಯತೆ: ಸಾಣೇಹಳ್ಳಿ ಗ್ರಾಮವು ಕಲೆ, ಧರ್ಮ ಮತ್ತು ಸಂಸ್ಕೃತಿಯ ತಾಣವಾಗಿದೆ. ಇಲ್ಲಿಯೇ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಕಸಾಪ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು. ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ಪರಿಷತ್ ಕೂಡ ಹೊಣೆಗಾರಿಕೆಯಿಂದ ಕಾರ್ಯಕ್ರಮ ಆಯೋಜಿಸಲಿದೆ. ಸರಳ, ಅರ್ಥಪೂರ್ಣ ಆಚರಣೆಗೆ ಆದ್ಯತೆ ನೀಡಲಾಗುವುದು ಎಂದರು.