

ಶಿವಮೊಗ್ಗ: ದೇಶೀಯ ವಿದ್ಯಾ ಶಾಲಾ ಸಮಿತಿ ಹಾಗೂ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಡಿ.4ರಿಂದ 6ರವರೆಗೆ ಕುವೆಂಪು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ತಿಳಿಸಿದರು.
ನೆಹರು ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 15 ಕಾಲೇಜುಗಳ 712 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 455 ವಿದ್ಯಾರ್ಥಿಗಳು, 257 ವಿದ್ಯಾರ್ಥಿನಿಯರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದ ಯಶಸ್ಸಿಗೆ 160 ಅಧಿಕಾರಿಗಳು ಮತ್ತು ತಾಂತ್ರಿಕ ವರ್ಗ, 75 ಸ್ವಯಂ ಸೇವಕರು ಶ್ರಮವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೀಡಾಪಟುಗಳಿಗೆ ಡಿವಿಎಸ್ ಕಾಲೇಜು ಹಾಗೂ ನೆಹರು ಕ್ರೀಡಾಂಗಣದಲ್ಲಿ, ಮಹಿಳಾ ಕ್ರೀಡಾಪಟುಗಳಿಗೆ ವಸತಿ ನಿಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಡಿ.4ರ ಬೆಳಗ್ಗೆ 10ಕ್ಕೆ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಡಿ.6ರಂದು ನಡೆಯುವ ಸಮಾರೋಪವನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಕೆ.ಎ.ಕೃಷ್ಣಮೂರ್ತಿ ಉದ್ಘಾಟಿಸುವರು. ಡಿವಿಎಸ್ ಅಧ್ಯಕ್ಷ ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಡಿ.6ರ ಬೆಳಗ್ಗೆ 7ಕ್ಕೆ ಮಹಿಳಾ-ಪುರುಷರ ಮ್ಯಾರಥಾನ್ ಓಟ ಎಂಆರ್‌ಎಸ್ ವೃತ್ತದಿಂದ ಆರಂಭವಾಗಿ ಲಕ್ಕಿನಕೊಪ್ಪವೃತ್ತ ಎಡಭಾಗಕ್ಕೆ ತಿರುಗಿ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಸಾಗಿ ಮತ್ತೆ ಎಂಆರ್‌ಎಸ್ ವೃತ್ತದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಡಿವಿಎಸ್ ಸಹ ಕಾರ್ಯದರ್ಶಿ ಡಾ. ಎ.ಎಸ್.ಸತೀಶ್‌ಕುಮಾರ್ ಶೆಟ್ಟಿ, ಪ್ರೊ. ಎನ್.ಕುಮಾರಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಸಚಿನ್ ಸುದ್ದಿಗೋಷ್ಠಿಯಲ್ಲಿದ್ದರು.