ಅಂತರ ಕಾಲೇಜ್ ಕಬಡ್ಡಿ ಪಂದ್ಯಾವಳಿ 14ರಿಂದ

Inter College Kabaddi Tournament
Published on

ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯ ಅಂತರ ಕಾಲೇಜ್​ಗಳ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳು ಹಾಗೂ ಹಾವೇರಿ ವಿವಿ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆ ಇಲ್ಲಿನ ಬಿಇಎಸ್ ಪದವಿ ಮಹಾವಿದ್ಯಾಲಯ ಆವರಣದಲ್ಲಿ ನ. 14 ಮತ್ತು 15 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ತಿಳಿಸಿದರು.

ಇಲ್ಲಿನ ಬಿಇಎಸ್ ಕಾಲೇಜನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಇಎಸ್ ಕಾಲೇಜು ಆಶ್ರಯದಲ್ಲಿ 3 ನೇ ಬಾರಿಗೆ ಹಾಗೂ ಹಾವೇರಿ ವಿವಿ ರಚನೆಯಾದ ಬಳಿಕ 2ನೇ ಬಾರಿ ಅಂತರ ಕಾಲೇಜ್​ಗಳ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹಾಗೂ ಕುಲಸಚಿವ ಡಾ.ಎಸ್.ಡಿ. ಬಾಲಕೋಟೆ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ ಎಂದರು.

47 ಕಾಲೇಜ್​ನ ಕ್ರೀಡಾಪಟುಗಳು ಆಗಮನ: ಪಂದ್ಯಾವಳಿಯಲ್ಲಿ ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ 47 ಕಾಲೇಜ್​ಗಳಿಂದ ಪುರುಷರ 30 ತಂಡ ಹಾಗೂ 10ಕ್ಕೂ ಹೆಚ್ಚು ಮಹಿಳಾ ತಂಡ ಸೇರಿದಂತೆ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ತೀರ್ಪಗಾರರ ಮಂಡಳಿಯ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದರು.

ಕ್ರೀಡಾ ವಿಭಾಗದ ಮುಖ್ಯಸ್ಥ ಸುರೇಶಕುಮಾರ ಪಾಂಗಿ ಮಾತನಾಡಿ, ಕಾಲೇಜ್ ಆವರಣದಲ್ಲಿ ಈಗಾಗಲೇ ಅಂಕಣ ಸಿದ್ಧವಾಗಿದ್ದು, ಮ್ಯಾಟ್​ಗಳ ಮೇಲೆ ಪಂದ್ಯಾವಳಿ ನಡೆಯಲಿವೆ. ಕ್ರೀಡಾಪಟುಗಳು ಕಡ್ಡಾಯವಾಗಿ ಮ್ಯಾಟ್ ಶೂಗಳೊಂದಿಗೆ ಪಾಲ್ಗೊಳ್ಳಬೇಕು. ಎಲ್ಲ ಕ್ರೀಡಾಪಟುಗಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಉಪನ್ಯಾಸಕರಾದ ಪ್ರಶಾಂತ್ ಎನ್.ಎಸ್., ಡಾ. ಪ್ರಭು ದೊಡ್ಮನಿ, ದೈಹಿಕ ಶಿಕ್ಷಕ ನಿರ್ದೇಶಕ ಶಶಿಧರ ಮಾಗೋಡ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ತೀರ್ಪಗಾರರ ಮಂಡಳಿಯ ಮಲ್ಲಿಕಾರ್ಜುನ ಕೋಡಿಹಳ್ಳಿ ಹಾಗೂ ಎ.ಟಿ. ಪೀಠದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net