

ಬೆಳ್ತಂಗಡಿ : ಸ್ಕೌಟ್ಸ್-ಗೈಡ್ಸ್‌ನಂತಹ ಪಠ್ಯೇತರ ಚಟುವಟಿಕೆಗಳು ಶಿಕ್ಷಣದಲ್ಲಿ ಅಗತ್ಯ ಎಂದು ಪರಿಗಣಿಸಬೇಕು. ಪರೋಪಕಾರಾಥರ್ಂ ಇದಮ್ ಶರೀರಂ ಎಂಬ ಸಂಸ್ಕೃತ ಸೂಕ್ತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಸದಸ್ಯೆ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್-ಗೈಡ್ಸ್ ಹಿರಿಯರ ವಿಭಾಗ) ಆಯೋಜಿಸಿದ ಒಂದು ದಿನದ ಜಿಲ್ಲಾಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ ಪ್ರಮುಕ 2025 ಉದ್ಘಾಟಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಆಯುಕ್ತ (ಸ್ಕೌಟ್ಸ್) ಬಿ.ಎಂ.ತುಂಬೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್.ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕಿ, ರೇಂಜರ್ ಲೀಡರ್ ಗಾನವಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಎಸ್‌ಡಿಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಇದ್ದರು.
ಕಾರ್ಯಕ್ರಮ ಸಂಯೋಜಕ, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನಸಾ ಅಗ್ನಿಹೋತ್ರಿ, ಭೂಮಿಕಾ ಕೆ.ಎಲ್.ಜೈನ್ ಮತ್ತು ಮೋಕ್ಷಿತಾ ನಿರೂಪಿಸಿದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ, ಅಸಾಮಾನ್ಯ ಸಾಮರ್ಥ್ಯ ಯುವಕರಲ್ಲಿದೆ. ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳು ಕೇವಲ ತಂಡದ ಪ್ರತಿನಿಧಿಗಳಲ್ಲ ಬದಲಾಗಿ ತಂಡದ ನಾಯಕರು, ಸಮಸ್ಯೆ ಪರಿಹರಿಸುವ ಶಕ್ತಿ ಹೊಂದಿರುವ ಹಾಗೂ ಇನ್ನೊಬ್ಬರಿಗೆ ಮಾದರಿಯಾಗುವಂಥ ವ್ಯಕ್ತಿಗಳು, ಬದಲಾವಣೆಯ ಹರಿಕಾರರು. ಅಶ್ವಿತ್ ಜೈನ್, ಕೆಪಿಸಿಸಿ ಕಾರ್ಯದರ್ಶಿ
ವಸ್ತು ಪ್ರದರ್ಶನ
ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್-ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು.