ಎಸ್‌ಡಿಎಂ ಮಹಿಳಾ ಕಾಲೇಜಿನಲ್ಲಿ ಗಮನ ಸೆಳೆದ ಅಂತರ ಕಾಲೇಜು ಸ್ಪರ್ಧೆ

SDM College
Published on

ಮೈಸೂರು: ಪ್ರತಿಯೊಬ್ಬರಲ್ಲೂ ಒಂದಲ್ಲಾ ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಯನ್ನು ಗುರುತಿಸಲು ಅಂತರ ಕಾಲೇಜು ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ ಪ್ರಾಂಶುಪಾಲ ಪ್ರೊ. ಸಾಯಿನಾಥ್ ಮಲ್ಲಿಗೆಮಾಡು ಅಭಿಪ್ರಾಯಪಟ್ಟರು.

ನಗರದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಭಿಜ್ಞಾನ್’ ಅಂತರ ಕಾಲೇಜು ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಯಾವ ಸಂದರ್ಭ ಹೊರ ಹೊಮ್ಮುತ್ತದೆ ಎಂದು ಯಾರಿಗೂ ಹೇಳಲು ಬರುವುದಿಲ್ಲ. ಅವಕಾಶ ಸಿಕ್ಕಾಗ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮುತ್ತದೆ. ನಿಮ್ಮಲ್ಲೂ ಸಹ ಅತ್ಯುತ್ತಮ ಕಲಾವಿದ ಇರಬಹುದು ಎಂದು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಪ್ರವೀಣ ಖ್ಯಾತಿಯ ರಂಜನ್ ಕಾಸರಗೋಡು ಮಾತನಾಡಿ, ನನಗೆ ನಟನೆ ಗೊತ್ತಿರಲಿಲ್ಲ. ಆದರೆ, ನನ್ನನ್ನು ಗುರುತಿಸಿ ರಿಷಬ್ ಶೆಟ್ಟಿ ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ನಟನೆ ಕಲಿಸಿದರು. ಇದೀಗ ಬಹುತೇಕರಿಗೆ ರಂಜನ್ ಕಾಸರಗೋಡು ಎಂದರೆ ಯಾರೆಂಬುದು ಗೊತ್ತಿಲ್ಲ. ಆದರೆ, ಪ್ರವೀಣ ಹೆಸರಿನಲ್ಲಿ ಇದೀಗ ಚಿರಪರಿಚಿತನಾಗಿದ್ದೇನೆ. ರಿಷಬ್ ಶೆಟ್ಟಿ ಅವರು ಇದೀಗ ನನಗೆ ನಿರ್ದೇಶನವನ್ನೂ ಕಲಿಸುತ್ತಿದ್ದು, ಅವರೇ ನನ್ನ ಗುರುಗಳು ಎಂದರು.

ವೇದಿಕೆಯಲ್ಲಿ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪ್ರೊ.ಭಾರತಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಎಸ್. ಸುಪ್ರಿತಾ, ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ. ನಯನ ಕುಮಾರಿ, ಸಾಂಸ್ಕೃತಿಕ ಸಂಘದ ಸಂಚಾಲಕಿ ಡಾ. ವಿನೋದಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಿ. ರಜಿತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿಹಾರಿಕಾ ಜೋಷಿ, ಪದಾಧಿಕಾರಿಗಳಾದ ಕೆ.ಎಂ. ಲಿಖಿತ, ಬಿ.ಬಿ. ಫಾತಿಮಾ ಫರ್ಜಿನ್, ಸೃಷ್ಟಿ ಕೌಶಿಕ್, ಎಂ.ಆರ್. ರುಚಿತಾ, ಎಚ್.ಜೆ. ವಿಂದ್ಯಾ, ಆರ್. ನಂದಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net