

ಹಾನಗಲ್ಲ: ಭ್ರಷ್ಟಾಚಾರದ ಅರ್ಥವೇ ಗೊತ್ತಿಲ್ಲದವರು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿರುವುದು ನೋವಿನ ಸಂಗತಿ. ಸಂಸ್ಥೆಯ ಮೇಲೆ ವಕ್ರದೃಷ್ಟಿ ಬೀರಿ ಇಲ್ಲಿನ ವ್ಯವಸ್ಥೆಯನ್ನು ಮೂಲೆಗುಂಪು ಮಾಡುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸುರೇಶ ರಾಯಕರ ಕಿಡಿಕಾರಿದರು.
ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ 19 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸಂಸ್ಥೆ ಅಭಿವೃದ್ಧಿ ಸಹಿಸದ ಕೆಲವರು ಸದಸ್ಯತ್ವ ಪಡೆಯುವ ನೆಪದಲ್ಲಿ ಸಂಸ್ಥೆಯ ವ್ಯವಸ್ಥೆಯನ್ನು ದಿವಾಳಿ ಮಾಡುವ ಹುನ್ನಾರದಲ್ಲಿದ್ದಾರೆ. ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಮಾತನಾಡಿ, ಸಂಸ್ಥೆಯ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಕಳೆದ 6 ತಿಂಗಳಿನಿಂದ ಸಂಸ್ಥೆ ಹೆಸರು ಕೆಡಿಸುವ ಹುನ್ನಾರಗಳು ನಡೆದಿದ್ದು, ಇದು ಎಲ್ಲೆಡೆ ಸಂಸ್ಥೆಯ ಬಗೆಗೆ ವ್ಯತಿರಿಕ್ತ ಭಾವನೆ ಬೆಳೆಸುತ್ತಿದೆ. ಆದರೆ ಇಂತಹ ಹುನ್ನಾರಗಳಿಗೆ ಸರಿಯಾದ ಉತ್ತರ ನೀಡಲು ಸಿದ್ಧ. ಸಂಸ್ಥೆಯನ್ನು ಅತ್ಯಂತ ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸಿದ ತೃಪ್ತಿ ನಮಗಿದೆ. ಸಾರ್ವಜನಿಕರು, ಸಂಸ್ಥೆಯ ಸದಸ್ಯರು ಸಂಸ್ಥೆಯ ಅಭಿವೃದ್ಧಿಯನ್ನು ಕೊಂಡಾಡಿದ್ದಾರೆ. ಹೊಸ ಸದಸ್ಯತ್ವ ನೀಡುವುದು ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟಿದ್ದು. ಬೇಕಾದವರು ನ್ಯಾಯಾಲಯದ ಮೊರೆ ಹೋಗಲಿ ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಬಳಿಗಾರ ಲೆಕ್ಕ ಪತ್ರ ಹಾಗೂ ಅಂದಾಜು ಪತ್ರಿಕೆಯನ್ನು ಮಂಡಿಸಿದರು. ನಿರ್ದೆಶಕರಾದ ಅಶೋಕ ಹಂಗರಗಿ, ಭಿಮನಗೌಡ ಪಾಟೀಲ, ಚಂದ್ರಶೇಖರ ಸುಬ್ಬಣ್ಣನವರ, ದುಶ್ಯಂತ ನಾಗರವಳ್ಳಿ, ರವಿಚಂದ್ರ ಪುರೋಹಿತ, ರವಿರಾಜ ಕಲಾಲ, ನಿಂಗಪ್ಪ ಗೊಬ್ಬೇರ, ಹುನಮಂತಪ್ಪ ಮಲಗುಂದ, ಮಧುಮತಿ ಪೂಜಾರ, ಲಕ್ಷ್ಮಣ ಕಂಚಿಗೊಲ್ಲರ, ಜಗದೇವ ಶಿಡ್ಲಾಪೂರ, ಅರುಣ ತಿರುಮಲೆ, ಪುರಸಭೆ ಮಾಜಿ ಅಧ್ಯಕ್ಷ ಎಂ.ಬಿ.ಕಲಾಲ, ಎ.ಎಸ್.ಬಳ್ಳಾರಿ ಇದ್ದರು.
ಸಭೆಯಲ್ಲಿ ಸಂಸ್ಥೆಯ ಸದಸ್ಯರಾದ ಗುರುರಾಜ ನಿಂಗೋಜಿ, ಘನಶ್ಯಾಮ ದೇಶಪಾಂಡೆ ಇತರರು ಮಾತನಾಡಿ, ಸಂಸ್ಥೆಯಲ್ಲಿ ರಾಜಕಾರಣದ ಅಗತ್ಯವಿಲ್ಲ. ಅಧಿಕಾರದ ಆಸೆಗಾಗಿ ಸಂಸ್ಥೆಯ ಹಿತ ಕಡೆಗಣಿಸುವುದು ಬೇಡ. ಬಯಸಿದವರಿಗೆ ಸದಸ್ಯತ್ವ ನೀಡಬೇಕು. ಶಿಕ್ಷಣ ಸಂಸ್ಥೆ ಇಲ್ಲಿನ ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತಕ್ಕಾಗಿ ಉಳಿಸೋಣ. ಹಾಗೂ ಸದಸ್ಯತ್ವ ನೀಡಲೇಬೇಕು. ಕೆಲವರು ಈಗಿರುವ ಆಡಳಿತ ಮಂಡಳಿ ಸದಸ್ಯತ್ವದ ವಿಷಯದಲ್ಲಿ ವ್ಯತಿರಕ್ತವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು. ಕೆಲವರು ಸಂಸ್ಥೆಯ ಹಿತ ಕಾಪಾಡಲು ಆಡಳಿತ ಮಂಡಳಿಯ ಯಾವುದೇ ನಿರ್ಧಾರಕ್ಕೆ ಬದ್ಧ ಎಂದರು. ಬಿ.ಎಸ್.ಕುಲಕರ್ಣಿ, ಎಸ್.ವಿ.ಹೊಸಮನಿ, ಗಣೇಶ ಮೂಡ್ಲಿಯವರ, ಪ್ರಶಾಂತ ಕಾಮನಹಳ್ಳಿ, ಶಿವಲಿಂಗಪ್ಪ ತಲ್ಲೂರ, ಬಿ.ಸಿ.ಪಾಟೀಲ, ರವಿ ಕುಲಕರ್ಣಿ, ರವಿಬಾಬು ಪೂಜಾರ, ಡಿ.ಎಸ್.ಗಂಟೇರ, ಯಲ್ಲಪ್ಪ ಶೇರಖಾನೆ, ಹನುಮಂತ ಬಾಳೂರ ಇದ್ದರು. ಶಿಕ್ಷಕ ನಿರಂಜನ ಗುಡಿ ಕಾರ್ಯಕ್ರಮ ನಿರೂಪಿಸಿದರು.
ನಿರ್ದೆಶಕರ ಸಾಮೂಹಿಕ ರಾಜಿನಾಮೆ
ಎಪ್ಪತ್ತೆರಡು ವರ್ಷಗಳ ಇತಿಹಾಸದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ 15 ನಿರ್ದೆಶಕರು ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಕರೆದಿದ್ದ ಸಂಘದ ಸಾಮಾನ್ಯ ಸಭೆಯ ನಂತರ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಬಳಿಗಾರ ಅವರಿಗೆ ರಾಜಿನಾಮೆ ಸಲ್ಲಿಸಿದರು. ಇನ್ನೊಬ್ಬ ನಿರ್ದೇಶಕಿ ರೇಖಾ ಶೆಟ್ಟರ ಸೆ. 17ರಂದೇ ರಾಜಿನಾಮೆ ಸಲ್ಲಿಸಿದ್ದು, ಆಡಳಿತಾಧಿಕಾರಿ ನೇಮಕವಾಗುತ್ತದೆ ಎಂದು ಎಂ.ಎಚ್. ಬಳಿಗಾರ ತಿಳಿಸಿದರು. ಸೆ.22ರಿಂದ ಸದಸ್ಯತ್ವ ನೀಡುವ ಪ್ರಕ್ರಿಯೆ ಆರಂಭಿಸುವ ಪ್ರಕಟಣೆ ಈ ಹಿಂದೆ ನೀಡಲಾಗಿತ್ತು. ಆದರೆ, ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಸದಸ್ಯತ್ವ ನೀಡಲು ಅವಕಾಶವಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು ಅಲ್ಲದೆ, ಸೂಚನಾ ಫಲಕದಲ್ಲಿಯೂ ಪ್ರಕಟಿಸಿದ್ದಾರೆ.
ನಿರ್ಗಮಿತ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತ ಕಾಯ್ದ ಈ ಸಂಸ್ಥೆಯ ಬೆಳವಣಿಗೆಯನ್ನು ಸಹಿಸದೇ ಕೆಲವರು ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಅರಾಜಕತೆ ಸೃಷ್ಟಿಸುತ್ತಿರುವುದು ವಿಷಾದನೀಯ. ಸಂಸ್ಥೆಯಲ್ಲಿ 3161 ವಿದ್ಯಾರ್ಥಿಗಳು ಇದ್ದು, 117 ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಸಾವಿರಾರು ಜನ ಸಂಸ್ಥೆಯ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿರುವುದರ ಹಿಂದಿನ ಉದ್ದೇಶವೂ ಒಳ್ಳೆಯದಲ್ಲ. ದುಷ್ಟ ಶಕ್ತಿಗಳಿಂದ ಸಂಸ್ಥೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಯಾವುದೇ ವಿಕಲ್ಪಗಳಿಲ್ಲದಂತೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು ರಾಜಿನಾಮೆ ಸಲ್ಲಿಸಿದ್ದೇವೆ ಎಂದರು.