ದೇವಳದೊಳಗೆ ನೀರು ನುಗ್ಗುವ ಭೀತಿ : ಸರ್ಕಾರ, ಜನಪ್ರತಿಧಿಗಳಿಗಿಲ್ಲದ ಕಾಳಜಿ : ತ್ರಿಕ್ಕನ್ನಾಡಿನಲ್ಲಿ ತೀವ್ರಗೊಂಡ ಸಮುದ್ರಕೊರೆತ

08
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ದಕ್ಷಿಣದ ಕಾಶಿ ಎಂದೇ ಖ್ಯಾತಿ ಪಡೆದಿರುವ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಸಮುದ್ರಕೊರೆತದ ಭೀತಿ ತಟ್ಟಿದ್ದು, ತಕ್ಷಣಕ್ಕೆ ತಡೆಗೋಡೆ ಸೇರಿದಂತೆ ರಕ್ಷಣಾ ಕಾಮಗಾರಿ ನಡೆಸದಿದ್ದಲ್ಲಿ, ದೇವಸ್ಥಾನದೊಳಗೆ ಸಮುದ್ರ ನೀರು ನುಗ್ಗುವ ಭೀತಿ ಎದುರಾಗಿದೆ.

ಕಾಸರಗೋಡಿನಿಂದ ಚಂದ್ರಗಿರಿ, ಕೋಟಿಕುಳಂ, ಬೇಕಲ ಹಾದಿಯಾಗಿ ಕಾಞಂಗಾಡಿಗೆ ಸಂಚರಿಸುವ ಕೆಎಸ್‌ಟಿಪಿ ರಸ್ತೆಯ ಅಂಚಿಗೆ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನವಿದ್ದು, ಸಮುದ್ರ ಕೊರೆತದಿಂದ ಈಗಾಗಲೇ ರಸ್ತೆಗೆ ಹಾನಿಯುಂಟಾಗಿದೆ. ರಸ್ತೆಯಿಂದ ಸುಮಾರು ನೂರೈವತ್ತು ಮೀಟರ್‌ಗೂ ಹೆಚ್ಚು ದೂರದಲ್ಲಿದ್ದ ಸಮುದ್ರ, ಬಿರುಸಿನ ಮಳೆ ಹಾಗೂ ಸಮುದ್ರಕೊರೆತದಿಂದ ಭೂಪ್ರದೇಶ ಕಬಳಿಸುತ್ತಾ ಸಮುದ್ರದ ಅಲೆಗಳು ರಸ್ತೆಗೆ ಅಪ್ಪಳಿಸಲಾರಂಭಿಸಿವೆ.

ಸಮುದ್ರ ಅಂಚಿನಲ್ಲಿರುವ ಪಳ್ಳಿವೇಟ ಮಂಟಪ ಹಾಗೂ ಕೊಡುಂಗಲ್ಲೂರು ಮಂಟಪ ಈಗಾಗಲೇ ಸಮುದ್ರ ಪಾಲಾಗಿದೆ. ಬಲವಾದ ಅಲೆಗಳಿಗೆ ತುತ್ತಾಗಿ ಕೆಎಸ್‌ಟಿಪಿ ರಸ್ತೆಯೂ ಹಾನಿಗೀಡಾಗತೊಡಗಿದೆ. ಈ ಪ್ರದೇಶದಲ್ಲಿ ಹಲವಾರು ಕುಟುಂಬಗಳೂ ವಾಸಿಸುತ್ತಿದ್ದು, ಇವರೆಲ್ಲರೂ ಪ್ರಾಣಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಮುಳುವಾಯಿತು ನಿರ್ಲಕ್ಷ್ಯ ಧೋರಣೆ

ಕೋಟಿಕುಳಂ, ತ್ರಿಕ್ಕನ್ನಾಡು ಪ್ರದೇಶ ನಿರಂತರ ಸಮುದ್ರ ಕೊರೆತಕ್ಕೀಡಾಗುತ್ತಿದ್ದರೂ ಇಲ್ಲಿ ಸೂಕ್ತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗದ ಸರ್ಕಾರದ ಧೋರಣೆ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲವೊಂದು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಸಮುದ್ರ ಕೊರೆತ ತಡೆಗಟ್ಟುವಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸಿವೆ. ತ್ರಿಕ್ಕನ್ನಾಡ್, ಕೋಟಿಕುಳಂ ಪ್ರದೇಶದಲ್ಲಿ ಸಮುದ್ರದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸುವಂತೆ ಕಳೆದ ಕೆಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಜನಪ್ರತಿನಿಧಿಗಳು ಮೌನ

ಈ ವರ್ಷ ಮಳೆಗಾಲ ಆರಂಭದಲ್ಲೇ ಇಲ್ಲಿ ಕಡಲ್ಕೊರೆತ ಆರಂಭಗೊಂಡಿದ್ದರೂ ಸರ್ಕಾರ ಕಣ್ತೆರೆದಿಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾದ ಸಂಸದರೂ ಇತ್ತ ಗಮನಹರಿಸಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಪ್ರಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಅಸ್ತಿತ್ವಕ್ಕೇ ಧಕ್ಕೆ ಬರುವ ರೀತಿಯಲ್ಲಿ ಸಮುದ್ರ ಕೊರೆತ ದಿನದಿಂದ ದಿನಕ್ಕೆ ಬಿರುಸುಪಡೆಯುತ್ತಿದ್ದರೂ ಜಿಲ್ಲಾಡಳಿತ ಅಥವಾ ಸರ್ಕಾರ ಇಲ್ಲಿ ಏನೂ ನಡೆದಿಲ್ಲದಂತೆ ವರ್ತಿಸುತ್ತಿವೆ. ದೇವಸ್ಥಾನದಲ್ಲಿ ಜುಲೈ 24ರಂದು ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃಬಲಿ ತರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಹಿಂದು ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ತ್ರಿಕ್ಕನ್ನಾಡ್ ಕ್ಷೇತ್ರದ ಬಗ್ಗೆ ಸರ್ಕಾರ ತೋರುವ ನಿರ್ಲಕ್ಷೃ ಧೋರಣೆಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.

ಸಮುದ್ರಕೊರೆತದಿಂದ ತ್ರಿಕ್ಕನ್ನಾಡ್ ಕೆಎಸ್‌ಟಿಪಿ ರಸ್ತೆ ಶಿಥಿಲಗೊಳ್ಳುತ್ತಿದೆ.
ಸಮುದ್ರಕೊರೆತದಿಂದ ತ್ರಿಕ್ಕನ್ನಾಡ್ ಕೆಎಸ್‌ಟಿಪಿ ರಸ್ತೆ ಶಿಥಿಲಗೊಳ್ಳುತ್ತಿದೆ.

ವಾಹನ ಸಂಚಾರಕ್ಕೂ ಆಪತ್ತು

ರಾಷ್ಟ್ರೀಯ ಹೆದ್ದಾರಿ- 66ರಲ್ಲಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿರುವುದರಿಂದ ಬಹುತೇಕ ವಾಹನಗಳು ಕೆಎಸ್‌ಟಿಪಿ ರಸ್ತೆಯನ್ನೇ ಅವಲಂಬಿಸುತ್ತಿವೆ. ತ್ರಿಕ್ಕನ್ನಾಡಿನಲ್ಲಿ ರಸ್ತೆ ಅಪಾಯದಂಚಿನಲ್ಲಿರುವುದರಿಂದ ಈ ಹಾದಿಯಾಗಿ ವಾಹನ ಸಂಚಾರವೂ ತೂಗುಯ್ಯಲೆಯಲ್ಲಿದೆ.

ಕಾಸರಗೋಡು ಜಿಲ್ಲೆಯಲ್ಲಿ ಸಮುದ್ರ ಕೊರೆತ ಸಮಸ್ಯೆ ಅತಿಯಾಗಿ ಕಾಡುತ್ತಿರುವ ಪ್ರದೇಶಗಳಲ್ಲಿ ಸೂಕ್ತ ಸರ್ವೇ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತ್ರಿಕನ್ನಾಡು ಹಾಗೂ ಕೋಟಿಕುಳಂ ಕರಾವಳಿಯಲ್ಲಿ ಸಮುದ್ರಕೊರೆತ ತಡೆಗಟ್ಟಲು ತುರ್ತು ಕ್ರಮ ತೆಗೆದುಕೊಳ್ಳಲು ಜಲಸಂಪನ್ಮೂಲ ಇಲಾಖೆಗೆ ಸೂಚನೆ ನೀಡಲಾಗಿದೆ. ಪಿ.ಅಖಿಲ್, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ), ಕಾಸರಗೋಡು https://www.vijayavani.net/inauguration-of-office-bearers-of-kuluru-lions-club https://www.vijayavani.net/rs-26-lakh-fraud-in-the-name-of-the-companys-md

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net