ಮನೋರಂಜನ್ ಮನೆಗೆ ಅಧಿಕಾರಿಗಳ ಭೇಟಿ

manoranjan mysore
Published on

ಮೈಸೂರು: ಸಂಸತ್ ಭವನದ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು ಹಳದಿ ಬಣ್ಣದ ಹೊಗೆ ಎಬ್ಬಿಸಿದ ಪ್ರಕರಣದ ಆರೋಪಿ ಮನೋರಂಜನ್ ಮನೆಗೆ ಗುರುವಾರ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದರು. ವಿಜಯನಗರ 2ನೇ ಹಂತದಲ್ಲಿರುವ ಆರೋಪಿಯ ಮನೆಗೆ ಬುಧವಾರ ಪೊಲೀಸರು ಭೇಟಿ ನೀಡಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಗುರುವಾರ ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪ ನಿರ್ದೇಶಕ ಪ್ರವೀಣ್ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಮನೆಯನ್ನು ಶೋಧಿಸಿದರು.

ಮನೋರಂಜನ್ ಮನೆಯಲ್ಲಿ ಒಂದು ಗಂಟೆ ಗುಪ್ತಚರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು. ಮನೋರಂಜನ್ ಉಳಿದುಕೊಳ್ಳುತ್ತಿದ್ದ ಕೊಠಡಿ ಜತೆಗೆ ಮನೆಯ ವಿವಿಧೆಡೆ ಶೋಧಕಾರ್ಯ ನಡೆಯಿತು. ಮನೋರಂಜನ್​ನ ಪೂರ್ವಪರ ಕುರಿತು ಪಾಲಕರಿಂದ ಮಾಹಿತಿ ಪಡೆಯಲಾಯಿತು. ಮನೋರಂಜನ್ ಸಂಸತ್ ಭವನದ ಮೇಲೆ ದಾಳಿ ನಡೆಸಲು ಕಾರಣವೇನು? ಆತ ಯಾರೊಂದಿಗೆಲ್ಲ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಮನೋರಂಜನ್ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆ ಮೂಲಕ ಮನೆಯಲ್ಲಿ ಘಟನೆಗೆ ಸಂಬಂಧಿಸಿದ ಯಾವುದೇ ಸಾಕ್ಷಿ ನಾಶವಾಗದಂತೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಎಲ್ಲಾ ಆರೋಪಿಗಳು ಹರ್ಯಾಣದಲ್ಲಿ ಮೊದಲ ಬಾರಿ ಭೇಟಿ ಮಾಡಿದ್ದಾರೆ. ನಂತರ ದೆಹಲಿ ಪಹಾಡ್​ಗಂಜ್​ನಲ್ಲಿ ಭೇಟಿಯಾಗಿ ಸಭೆ ನಡೆಸಿದ್ದರು. ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿದ್ದ ಆರೋಪಿಗಳು, ಸರ್ಕಾರಕ್ಕೊಂದು ದೊಡ್ಡ ಸಂದೇಶ ರವಾನೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.

ಸಮಗ್ರ ತನಿಖೆ ನಡೆಯಲಿದೆ ಎಂದ ಜೋಶಿ: ಈ ಹಿಂದೆ ಪ್ರತಾಪ್ ಸಿಂಹ ನೀಡಿದ್ದ ಪಾಸ್ ಬಳಸಿಕೊಂಡು ಆರೋಪಿಗಳು ಸಂಸತ್​ಗೆ ಬಂದಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಬುಧವಾರ ಪ್ರತಾಪ್ ಸಿಂಹ ನೀಡಿದ್ದ ಪಾಸ್​ನಲ್ಲಿ ಬಂದಿದ್ದು ನಿಜ. ಈ ಬಗ್ಗೆ ಎಲ್ಲಾ ರೀತಿಯ ಸಮಗ್ರ ತನಿಖೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಹಳೇ ಸಂಸತ್​ಗೂ ಭೇಟಿ ನೀಡಿದ್ದ: ಮನೋರಂಜನ್ ಈ ಹಿಂದೆ ಹಳೆಯ ಸಂಸತ್ ಭವನಕ್ಕೂ ಭೇಟಿ ನೀಡಿದ್ದ. ಆ ಸಂದರ್ಭ ಆತ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಸಂದರ್ಶಕರ ಪಾಸ್ ಪಡೆದುಕೊಂಡಿದ್ದ. ಆ ವೇಳೆ ಏಕಾಂಗಿಯಾಗಿ ಸಂಸತ್​ಗೆ ಹೋಗಿಬಂದಿದ್ದ.

ಎಡಪಂಪಥೀಯ ಸಂಘಟನೆಯೊಂದಿಗೆ ನಂಟು: ಮನೋರಂಜನ್ ಎಡಪಂಥೀಯ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ. ಸಂಸದ ಪ್ರತಾಪ್​ಸಿಂಹ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆತ ಸಂಸದರ ಕಚೇರಿಯಿಂದ ಪಾಸ್ ಪಡೆದು ಸಂಸತ್ ಒಳಗೆ ನುಗ್ಗಿದ್ದಾನೆ ಎಂಬುದು ಪ್ರತಾಪ್ ಸಿಂಹ ಬೆಂಬಲಿಗರ ಅಭಿಪ್ರಾಯ. ಇದಕ್ಕೆ ಪೂರಕವಾಗಿ ಮನೋರಂಜನ್ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಎಸ್​ಎಫ್​ಐ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಛಾಯಾಚಿತ್ರವನ್ನು ಪ್ರತಾಪ್ ಸಿಂಹ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಿಕ್​ಬಾಕ್ಸರ್: ಮನೋರಂಜನ್ ತನ್ನ ಮನೆಯ ಸುತ್ತಮುತ್ತಲಿನ ಮಕ್ಕಳಿಗೆ ಸಮೀಪದ ಉದ್ಯಾನದಲ್ಲಿ ಸಮಯ ಸಿಕ್ಕಾಗಲೆಲ್ಲ ಕಿಕ್ ಬಾಕ್ಸಿಂಗ್ ತರಬೇತಿ ನೀಡುತ್ತಿದ್ದ. ಆದರೆ, ಯಾರ ಬಳಿಯೂ ಶುಲ್ಕ ಪಡೆದಿರಲಿಲ್ಲ. ಅಲ್ಲದೆ, ಮಕ್ಕಳಿಗೆ ಆತ ಯಾವುದೇ ಸಿದ್ಧಾಂತವನ್ನು ತುಂಬುವ ಕಾರ್ಯವನ್ನು ಮಾಡಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಆತ ಎಲ್ಲರೊಂದಿಗೂ ಬೆರೆಯುತ್ತಿರಲಿಲ್ಲ.

ಇನ್​ಸ್ಟಾಗ್ರಾಂ ಪೋಸ್ಟ್: ಸಾಗರ್ ಶರ್ಮ ಕೃತ್ಯಕ್ಕೆ ಮುನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ. ಅದರಲ್ಲಿ ಜೀತೇ ಯಾ ಹಾರೆ, ಕೋಶಿಶ್ ತೋ ಜರೂರಿ ಹೇ. ಅಬ್ ದೇಖ್ನಾ ಯೇ ಹೇ.. ಸಫರ್ ಕಿತ್​ನಾ ಹಸೀನ್ ಹೋಗಾ...ಉಮ್ಮೀದ್ ಹೇ ಫಿರ್ ಮಿಲೇಂಗೆ (ನಾವು ಗೆಲ್ಲುತ್ತೇವೋ ಸೋಲುತ್ತೇವೋ ಮುಖ್ಯವಲ್ಲ. ಪ್ರಯತ್ನಿಸುವುದು ಮುಖ್ಯ...) ಎಂದು ಬರೆದುಕೊಂಡಿದ್ದ.

ಮಗನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಕುಟುಂಬ: ಮನೋರಂಜನ್ ಕುಟುಂಬದವರು ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಮಲ್ಲಾಪುರ ಗ್ರಾಮದವರು. ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸಬೇಕು ಎಂಬ ಕಾರಣಕ್ಕೆ ಪಾಲಕರು ಹುಟ್ಟೂರು ತೊರೆದು ಮೈಸೂರಿ ನಲ್ಲಿ ಬಂದು ನೆಲೆ ನಿಂತರು. 15 ವರ್ಷಗಳ ಹಿಂದೆ ಮನೋರಂಜನ್ ತಂದೆ ದೇವರಾಜೇಗೌಡ ಕುಟುಂಬದೊಂದಿಗೆ ಮೈಸೂರಿಗೆ ಆಗಮಿಸಿದರು. ಮಗನಿಗೆ ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಕೊಡಿಸಿದರು. ಮನೋರಂಜನ್ ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಆದರೂ ಆತನನ್ನು ಹೆಚ್ಚು ಸೆಳೆದಿದ್ದು ಕ್ರಾಂತಿಕಾರಿ ಹಾಗೂ ಭೂಗತ ಲೋಕದ ಕೃತಿಗಳು.

ಮೈಸೂರಿಗೆ ಭೇಟಿ ನೀಡಿದ್ದ ಸಾಗರ್ ಶರ್ಮ: ಉತ್ತರಪ್ರದೇಶದ ಲಖನೌನ ಆಲಂಭಾಗ್ ಬಳಿಯ ರಾಮ ನಗರದ ನಿವಾಸಿ, ಸಂಸತ್ ದಾಳಿಯ ಆರೋಪಿ ಸಾಗರ್ ಶರ್ಮ ಮೇ ತಿಂಗಳಿನಲ್ಲಿ ಮೈಸೂರಿಗೆ ಭೇಟಿ ನೀಡಿದ್ದ. ಈತನ ಮೈಸೂರು ಭೇಟಿಯ ಹಿನ್ನೆಲೆ ಏನು? ಮೈಸೂರಿಗೆ ಭೇಟಿ ನೀಡಿ ಯಾರೊಂದಿಗೆಲ್ಲ ಮಾತುಕತೆ ನಡೆಸಿದ್ದ? ಆ ಸಂದರ್ಭದಲ್ಲಿಯೇ ದಾಳಿಗೆ ಸಂಚು ರೂಪಿಸಲಾಗಿತ್ತೇ ಎಂಬ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net