

ಬಂಟ್ವಾಳ: ಮಂಚಿಯಲ್ಲಿ ಸಾಮಾಜಿಕ ಸಾಮರಸ್ಯ ಇದೆ. ಇದಕ್ಕೆ ಕಾರಣ ಇಲ್ಲಿ ಸಿಕ್ಕ ಶಿಕ್ಷಣ. ಶಿಕ್ಷಕರಾಗಿದ್ದ ಕನ್ನಡ ಪಂಡಿತ ಎ.ಪಿ. ತಿಮ್ಮಯ್ಯನ್, ಶಿವಣ್ಣ ಮಾಸ್ತರ್, ಸುಬ್ಬಣ್ಣ ಮಾಸ್ತರ್ ಮಾಡುತ್ತಿದ್ದ ಪಾಠ ನಮ್ಮೊಳಗೆ ಸಾಹಿತ್ಯವನ್ನು ಜೀವಂತವಾಗಿರಿಸಿದೆ. ಯುವ ಪೀಳಿಗೆಯನ್ನು ಬೌದ್ಧಿಕವಾಗಿ ಬಲಾಢ್ಯಗೊಳಿಸುವ ಸಾಹಿತ್ಯ ಇಂದಿನ ಅಗತ್ಯ ಎಂದು ಕನ್ನಡ ಪ್ರಾಧ್ಯಾಪಕಿ, ಸಾಹಿತಿ ಡಾ.ನಾಗವೇಣಿ ಮಂಚಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ಎರಡು ದಿನ ಸಾಹಿತ್ಯದಿಂದ ಸಾಮರಸ್ಯ ಎನ್ನುವ ಆಶಯದೊಂದಿಗೆ ನಡೆಯುತ್ತಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಅತಿಥಿಗಳು ನೂತನ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಮ್ಮೆಳನಾಧ್ಯಕ್ಷ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ, ಸ್ವಾಗತಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಡಿ.ವೈ. ಪಾಟೀಲ ಅಂತಾರಾಷ್ಟ್ರೀಯ ಕುಲಸಚಿವ ಡಾ.ಬೀರನ್ ಮೊದೀನ್, ಉದ್ಯಮಿ ಚಂದ್ರಹಾಸ ಬಾಲಜಿ ಬೈಲು, ಅಮ್ಟೂರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನೋಯಲ್ ಲೋಬೊ, ದ.ಕ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮುಲ್ಕಿ ಕಸಾಪ ಅಧ್ಯಕ್ಷ ಮಿಥುನ್ ಉಡುಪ, ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಗೌರವ ಕೋಶಾಧಿಕಾರಿ ಡಿ.ಬಿ. ಅಬ್ದುಲ್ ರಹಿಮಾನ್, ಸ್ವಾಗತ ಸಮಿತಿ ಕೋಶಾಧಿಕಾರಿ ಎಂ.ಡಿ. ಮಂಚಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಸಂಯೋಜಕ ರಾಮ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಪ್ರಸ್ತಾವನೆಗೈದರು. ಗೌರವ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ ಭಟ್ ವಂದಿಸಿದರು, ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ತಾರಾನಾಥ ಕೈರಂಗಳ ನಿರ್ವಹಿಸಿದರು.
ಕೊಳ್ನಾಡು ಗ್ರಾಪಂ ಅಧ್ಯಕ್ಷ ಮಹಮ್ಮದ್ ಅಶ್ರಫ್ ರಾಷ್ಟ್ರಿಧ್ವಜ, ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜ, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ವೈಭವದ ಮೆರವಣಿಗೆ: ಕುಕ್ಕಾಜೆಯ ಶ್ರಿ ಸಿದ್ಧಿವಿನಾಯಕ ಮಂದಿರದ ಬಳಿಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಮಂಚಿ ಗ್ರಾ.ಪಂ. ಅಧ್ಯಕ್ಷ ಜಿ. ಇಬ್ರಾಹಿಂ ಪುಷ್ಪಾರ್ಚನೆ ಮಾಡಿದರು. ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಮಂದಿರದ ಅಧ್ಯಕ್ಷ ಎನ್. ಸಂಜೀವ ಆಚಾರ್ಯ ಉದ್ಘಾಟಿಸಿದರು. ಉದ್ಯಮಿ ರವಿಕುಮಾರ್, ಉಮನಾಥ ರೈ ಮೇರಾವು, ರವಿ.ಜಿ. ಪೂಜಾರಿ, ಜೆಫ್ರಿ ಲೂವಿಸ್, ಪಂಚಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ನಿರ್ಮಲ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಮುಕುಂದ ಪ್ರಭು ವಸ್ತು ಪ್ರದರ್ಶನ, ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು ಪುಸ್ತಕ ಮಳಿಗೆ ಉದ್ಘಾಟಿಸಿದರು.
ಜನಜೀವನದ ಕೈಗನ್ನಡಿ
ಸಾಹಿತ್ಯವು ಸಂಸ್ಕೃತಿ. ಸಾಹಿತ್ಯವು ಜನಜೀವನದ ಕೈಗನ್ನಡಿ. ಸಾಹಿತ್ಯ ಸಾಮಾಜಿಕ ಬದುಕನ್ನು ನೇರ್ಪುಗೊಳಿಸಬಲ್ಲ, ಜನಜೀವನಕ್ಕೆ ಉತ್ತಮ ಪ್ರೇರಣೆ ಕೊಡುವ ಪ್ರಧಾನ ಸಲಕರಣೆ. ಸಮಗ್ರ ಸಾಮಾಜಿಕ ಹಿತದ ಕೃತಿಗಳೆಲ್ಲವೂ ಸಾಹಿತ್ಯವೇ. ಸಾಮಾಜಿಕ-ಸಾಂಸ್ಕೃತಿಕ ಹಿತವನ್ನು ಸಾಧಿಸಬಹುದಾದ ಬರಹಗಳು ನಿರ್ವಿವಾದವಾಗಿ ಸಾಹಿತ್ಯವೇ ಆಗಿವೆ. ಕಾವ್ಯ, ನಾಟಕ, ಕತೆ-ಕವಿತೆ, ನೀಳ್ಗತೆ-ಕಾದಂಬರಿಗಳು ಜನಪದದ ಜತೆಗೆ ಚಿತ್ರ, ವ್ಯಂಗ್ಯಚಿತ್ರ, ಸಂಗೀತ, ಸುಗಮ ಸಂಗೀತ, ನೃತ್ಯ, ಹರಿಕೀರ್ತನೆ, ಗಮಕ ವಾಚನ, ಶಿಲ್ಪಕಲೆ, ವರ್ಣಚಿತ್ರಗಳಂತಹ ಬಹುತೇಕ ಪ್ರಕಾರಗಳು ಸಂಸ್ಕೃತಿಯ ವೈಭವವನ್ನು ಪ್ರತಿಫಲಿಸುತ್ತವೆ. ಪತ್ರಿಕಾ ಮಾಧ್ಯಮವೂ ಸಾಹಿತ್ಯ ಸಂಸ್ಕೃತಿಯ ಉಜ್ಜೀವನಕ್ಕೆ ಚೇತೋಹಾರಿಯಾಗಿ ಕೊಡುಗೆ ನೀಡಿರುವುದು ವಸ್ತುಸ್ಥಿತಿ ಎಂದು ಸಮ್ಮೇಳನಾಧ್ಯಕ್ಷ ಮುಳಿಯ ಶಂಕರಭಟ್ಟ ತಿಳಿಸಿದರು.