ಬೌದ್ಧಿಕ ಆಸ್ತಿ ರಾಷ್ಟ್ರೀಯ ಕಾರ್ಯಾಗಾರ 22ರಂದು

Published on

ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಎಂ.ಎಸ್.ಎಂ.ಇ. ಬೌದ್ಧಿಕ ಆಸ್ತಿ ಫೆಸಿಲಿಟೇಶನ್ (ಐಪಿಎಸ್ಸಿ) ಘಟಕವು ಎಂ.ಎಸ್.ಎಂ.ಇ. ಅಭಿವದ್ಧಿ ಕಚೇರಿ ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಕಾರದೊಂದಿಗೆ ಜೂನ್ 22ರಂದು ಬೆಳಗ್ಗೆ 9ಕ್ಕೆ ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಆಡಿಟೋರಿಯಂನಲ್ಲಿ ರಾಷ್ಟ್ರ ಮಟ್ಟದ ಬೌದ್ಧಿಕ ಆಸ್ತಿ ಕಾರ್ಯಾಗಾರ ಏರ್ಪಡಿಸಿದೆ.

ಇದು ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯ (ಎಂ.ಎಸ್.ಎಂ.ಇ)ದ ದೂರದೃಷ್ಟಿಯ ಉಪಕ್ರಮವಾಗಿದ್ದು, ಎಂಎಸ್ಎಂಇ ನಾವಿನ್ಯತೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಸ್ಟಾರ್ಟ್ ಅಪ್ ಗಳು, ನವೋದ್ಯಮಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತಾಗಿ ಅರಿವು ಮೂಡಿಸುವದಕ್ಕಾಗಿ ಕಾರ್ಯಕ್ರಮ ವಿನ್ಯಾಸಗೊಳಿಸಲಾಗಿದೆ.

ಕಾರ್ಯಾಗಾರದಲ್ಲಿ ಎಂ.ಎಸ್.ಎಂ.ಇ. ಬೆಳವಣಿಗೆಯಲ್ಲಿ ವಿನೂತನ ಆವಿಷ್ಕಾರಗಳು, ಸಂಶೋಧನೆ ಹಾಗೂ ಬೆಳವಣಿಗೆಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಹಾಗೂ ಕಾಯ್ದಿರಿಸುವಿಕೆ, ವಿನೂತನ ಆವಿಷ್ಕಾರಗಳನ್ನು ನಿಮ್ಮ ಉದ್ಯಮಗಳಿಗೆ ಅಳವಡಿಸಿಕೊಳ್ಳುವಿಕೆ- ಹಕ್ಕುಸ್ವಾಮ್ಯದ ಕಲ್ಪನೆ, ತಂತ್ರಜ್ಞಾನದ ವರ್ಗಾವಣೆ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ವಾಣಿಜ್ಯೀಕರಣ ಹಾಗೂ ಧನಸಹಾಯ ಮತ್ತು ಎಂ.ಎಸ್.ಎಂ.ಇ. ಯೋಜನೆಗಳ ಕುರಿತು ಚರ್ಚೆ ನಡೆಯಲಿವೆ.

ಮನೋಹರ ಇಂಡಸ್ಟ್ರೀಸ್ ಸಿಇಒ ಮನೋಹರ ಕೊಟ್ಟೂರಶೆಟ್ಟರ, ಕರ್ನಾಟಕ ರಾಜ್ಯ ಕಾನೂನು ವಿವಿ ಪ್ರಾಧ್ಯಾಪಕಿ ಡಾ. ಅರ್ಚನಾ ಕೆ., ಇನ್ನೋಕೋರ್ ಟೆಕ್ನಾಲಜಿಸ್ ಸಿಇಒ ಪ್ರಭುಲಿಂಗ ಹಂಚಿನಾಳ, ಎಐಸಿಟಿಇಯ ಸ್ಯಾಮ್ ಜಯಕುಮಾರ, ಎಂಎಸ್ಎಂಇ ಸಹ ನಿರ್ದೇಶಕ ಕಾತಿರ್ಕ ಆರ್. ಇವರು ಉಪನ್ಯಾಸ ನೀಡುವರು.

ಉದ್ಯಮಿಗಳಾದ ಎಂ.ವಿ. ಕರಮರಿ, ಗಿರೀಶ ನಲವಡಿ, ಬಿ.ಎಸ್. ಜವಳಗಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣೀಕರಣ, ಪೇಟೆಂಟ್, ಟ್ರೇಡಮಾರ್ಕ್ಸ್, ಕೃತಿಸ್ವಾಮ್ಯ, ವಿನ್ಯಾಸಗಳು, ಭೌಗೋಳಿಕ ಸೂಚನೆಗಳು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net