

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಳ್ಳೆಯ ಸಂಗತಿಗಳನ್ನು ಮುಂದಿನ ಪೀಳಿಗೆಗೆ ಸಾಗಿಸುವ ಉತ್ತಮ ಮಾಧ್ಯಮ ಓದು. ನಮ್ಮ ಬುದ್ಧಿಗೆ ಹಿರಿತನ ಬರುವುದೇ ಓದಿನಿಂದ. ಸ್ವಂತದ ಸಂವೇದನೆಯಿಂದ ಓದುವುದು ಬಹಳ ಕಡಿಮೆ. ಒಳ್ಳೆ ವಿಷಯಗಳ ಆಯ್ಕೆ ಮಾಡಿ ಮಕ್ಕಳಿಗೆ ರುಚಿಸುವಂತೆ ತಿಳಿಸಿದಾಗ ಮಾತ್ರ ಒಳ್ಳೆ ಸಂಸ್ಕೃತಿ ನಿರ್ಮಾಣವಾಗುತ್ತದೆ ಎಂದು ಪತ್ರಕರ್ತ ಹರ್ಷವರ್ಧನ ಶೀಲವಂತ ಅಭಿಪ್ರಾಯಪಟ್ಟರು.
ನಗರದ ಅನ್ವೇಷಣ ಕೂಟದ ವತಿಯಿಂದ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಓದು, ಸಂಸ್ಕೃತಿ ಮತ್ತು ಸಂಸ್ಕಾರ ವಿಷಯ ಕುರಿತು ಅವರು ಮಾತನಾಡಿದರು.
ವಯಸ್ಸಿಗೆ ಮೀರಿದ ಬುದ್ಧಿಮತ್ತೆಯ ಇಂದಿನ ಮಕ್ಕಳಲ್ಲಿ ತಿಳಿವಳಿಕೆ ಮತ್ತು ನಡವಳಿಕೆಗಳ ನಡುವಿನ ಕಂದರ ಬೆಸೆಯುವುದೇ ಸಮಸ್ಯೆಯಾಗಿದೆ. ಹಿಂದಿನವರಿಗೆ ಬೌದ್ಧಿಕ ಪ್ರಾಮಾಣಿಕತೆ ಇತ್ತು. ವ್ಯಾಕರಣ, ವ್ಯಾಖ್ಯಾನಗಳೇ ಬದಲಾಗಿರುವ ಇಂದಿನ ಕಾಲದಲ್ಲಿ ಉತ್ತಮ ಮೌಲ್ಯ, ನಮ್ಮ ಅನುಭವಗಳನ್ನು ಪ್ರಾಮಾಣಿಕವಾಗಿ ಮುಂದಿನವರಿಗೆ ತಲುಪಿಸಿದಾಗ ಮಾತ್ರ ಮತ್ತೊಮ್ಮೆ ಶ್ರೀಮಂತ ಸಂಸ್ಕೃತಿಯೊಂದರ ಪುನರೋದಯ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅಮೃತ ಯಾರ್ದಿ ಮಾತನಾಡಿ, ಪ್ರತಿ ಮನೆಯಲ್ಲಿ ಮೌಲ್ಯಾಧಾರಿತ ಪುಸ್ತಕಗಳ ಸಂಗ್ರಹ, ಮಕ್ಕಳಿಗೆ ಇವುಗಳ ಶ್ರವಣ, ಪಠಣಗಳು, ತಪ್ಪದೆ ನಡೆಯಬೇಕು. ಇದರ ಮೂಲಕ ಆ ಕುಟುಂಬಕ್ಕೊಂದು ಸಂಸ್ಕಾರ ದೊರೆತರೆ ಅದೇ ಒಳ್ಳೆಯ ಸಂಸ್ಕೃತಿಯಾಗಿ ಬೆಳಗುತ್ತದೆ ಎಂದರು.
ನಂತರ ಸಂವಾದ ನಡೆಯಿತು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಕಿ, ಹರ್ಷ ಡಂಬಳ, ಎಂ.ಆರ್. ಬಾಳಿಕಾಯಿ, ಅರವಿಂದ ಕುಲಕರ್ಣಿ, ರಮೇಶ ಗೋಡಬೋಲೆ, ಆರ್.ಎಂ. ಹೊಸಮನಿ, ಕೆ.ಎಸ್. ಘಾಣೇಕರ, ಮಲ್ಲಿಕಾರ್ಜುನ ಚಿಕ್ಕಮಠ, ರಾಜೀವ ಪಾಟೀಲಕುಲಕರ್ಣಿ, ಸರೋಜಾ ಕುಲಕರ್ಣಿ, ಸೀಮಾ ಪರಾಂಜಪೆ, ಇತರರು ಇದ್ದರು.