ವೈಚಾರಿಕ, ಹೃದಯವಂತಿಕೆ ಶಿಕ್ಷಣ ಅಗತ್ಯ

12M.D.R.1
ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ಗ್ಲೋಬಲ್ ದಶಮಾನೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Published on

ಮದ್ದೂರು: ಮಕ್ಕಳಿಗೆ ವೈಚಾರಿಕತೆ ಹಾಗೂ ಹೃದಯವಂತಿಕೆಯ ಶಿಕ್ಷಣ ಅಗತ್ಯ. ಇದರಿಂದಾಗಿ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದ ನಾಥ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸರ್ವಶಿವ ಎಜುಕೇಶನ್ ಟ್ರಸ್ಟ್ ಹಾಗೂ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ದಶಮಾನೋತ್ಸವ-2025 ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬುದ್ಧಿವಂತಿಕೆ, ಹೃದಯವಂತಿಕೆ, ವೈಚಾರಿಕತೆ, ಮಕ್ಕಳಲ್ಲಿ ಕಡಿಮೆಯಾಗುತ್ತಿದ್ದು, ಇಂತಹ ಕಾರ್ಯಗಳ ಬಗ್ಗೆ ಕಾರ್ಯಯೋಜನೆ ರೂಪಿಸಿ ಜ್ಞಾನಾರ್ಜನೆ ಜತೆಗೆ ಕಲಿಕಾ ದೇಗುಲಗಳಲ್ಲಿ ಹೃದಯವಂತಿಕೆಯನ್ನು ಬೆಳೆಸಲು ಶಿಕ್ಷಕರು ಈಗಿನಿಂದಲೇ ಮಕ್ಕಳನ್ನು ಅಣಿ ಗೊಳಿಸಬೇಕು ಎಂದರು.

ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೇ ಸಾಲದು. ದಿನನಿತ್ಯದ ಕಷ್ಟ ಕಾರ್ಪಣ್ಯಗಳನ್ನು ತಿಳಿಸುವಂತೆ ಅಂತಹ ಕಷ್ಟಗಳನ್ನು ತಿಳಿಸದಿದ್ದರೆ ಮುಂದೊಂದು ದಿನ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿದರು.

ವೈಜ್ಞಾನಿಕ ಮನೋಭಾವ, ಸಂಸ್ಕಾರ, ಇವುಗಳನ್ನು ಜೀವನದುದ್ದಕ್ಕೂ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಮನಸ್ಸನ್ನು ಬುದ್ಧಿವಂತಿಕೆಯಿಂದ ನಿಯಂತ್ರಣ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಪ್ರತಿಯೊಬ್ಬರೂ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಜತೆಗೆ ತಾವು ಹುಟ್ಟಿ ಬೆಳೆದ ಗ್ರಾಮ, ಪಾಲಕರು, ಹಿರಿಯರು, ಶಿಕ್ಷಕರನ್ನು ಗೌರವಿಸುವ ಪ್ರವೃತ್ತಿಯನ್ನು ರೂಡಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಬೆಳೆದು ಎಲ್‌ಕೆಜಿಯಿಂದ ಡಾಕ್ಟರೇಟ್ ವರೆವಿಗೂ ಮನೆ ಬಾಗಿಲಿನಲ್ಲೇ ಶಿಕ್ಷಣ ದೊರಕುತ್ತಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಂದೂ ಮಗುವಿಗೂ ಗುಣಮಟ್ಟದ ಶಿಕ್ಷಣ ಜತೆಗೆ ಆಚಾರ-ವಿಚಾರ, ಸಂಸ್ಕೃತಿ ಬೆಳೆಸಿಕೊಂಡು ಕಷ್ಟದ ಬದುಕಿನಲ್ಲಿ ತಮಗೆ ಶಿಕ್ಷಣ ನೀಡುತ್ತಿರುವ ತಂದೆ-ತಾಯಿಗಳಿಗೆ ಫಲಶೃತಿ ನೀಡುವ ಮೂಲಕ ತಮ್ಮದೇ ಕೊಡುಗೆ ನೀಡಬೇಕು ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಜ್ಞಾನಾರ್ಜನೆ ಕಲ್ಪಿಸುತ್ತಿರುವ ಸಂಸ್ಥೆಯ ಕಾರ್ಯ ಸ್ಥಾಪನೆಯಾಗಿದ್ದು, ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಕ್ಷರ ಕಲಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಮನರಂಜನೆ ಹಾಸ್ಯ ಕಲಾವಿದ ಗಿಲ್ಲಿ ನಟ ನಟರಾಜು ಹಾಸ್ಯದ ಮಾತಿನ ಮುಖಾಂತರ ಸಭೆಯಲ್ಲಿದ್ದ ಪಾಲಕರು ಮಕ್ಕಳನ್ನು ರಂಜಿಸಿದರು. ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು.

ಬಿಇಒಸಿ ಎಚ್.ಕಾಳಿರಯ್ಯ ವಿಜೇತ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬಹುಮಾನ ವಿತರಿಸಿದರು. ಈ ವೇಳೆ ವಿನುತಾ ಉದಯ್ ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯೆ ಬಿ.ಸಿ.ಸರ್ವಮಂಗಳಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಸಂತೋಷ್‌ಗೌಡ, ಉಪಾಧ್ಯಕ್ಷ ಚಂದ್ರ ನಾಯಕ್,ಕಾರ್ಯದರ್ಶಿ ಜ್ಯೋತಿ ಗಿರೀಶ್, ಮುಖ್ಯಶಿಕ್ಷಕಿ ಎ.ಬಿ.ಪಾವನ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net