ರೈತರಿಗಾಗಿ ವಿಶೇಷ ಯೋಜನೆ ಜಾರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Integrated Livelihood Workshop Mandya
Published on

ಮಂಡ್ಯ: ರೈತರಿಗೆ ಹೆಚ್ಚಿನ ಅನುಕೂಲ ಮಾಡುವ ಉದ್ದೇಶದಿಂದ ಕೃಷಿ ಕವಚ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಕೃಷಿಕರು ಇದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಬೆಲ್ಲದನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ‘2 ವರ್ಷದ ಸಮಗ್ರ ಸಹಭಾಗಿತ್ವ ದೃಷ್ಟಿಯ ಬದು ಸಂಜೀವಿನಿ ಅಭಿಯಾನ’ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೃಷಿ ಕವಚ ಕಾರ್ಯಕ್ರಮದ ಕೃಷಿ ಇಲಾಖೆ ಯೋಜನೆಗಳ ಒಗ್ಗೂಡಿತ ಬದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ನೀರಿನ ಉಪಯೋಗ ಹಾಗೂ ಮಣ್ಣಿನ ಸವಕಳಿ ತಡೆಯಲು ಕಾರ್ಯಕ್ರಮ ರೂಪಿಸಲಾಗಿದೆ. ಮುಖ್ಯವಾಗಿ ಮಳೆಯಾಶ್ರಿತ ಹಾಗೂ ಕಡೇ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದ್ದು, ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲು ಅವಕಾಶವಿದೆ. ಕೃಷಿ ಭಾಗ್ಯ, ರೈತ ಸಮೃದ್ಧಿ ಯೋಜನೆ, ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಆರ್‌ಕೆವಿವೈ-ಸಮಗ್ರ ಕೃಷಿ ಪದ್ಧತಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು ಕಾರ್ಯಕ್ರಮ ಒಗ್ಗೂಡಿಸಿ ರೈತರಿಗೆ ಅವಕಾಶ ನೀಡಲಾಗಿದೆ. ಈ ಒಟ್ಟಾರೆ ಯೋಜನೆಗಳಿಂದ ಪ್ರತಿ ರೈತರಿಗೆ ಎರಡೂವರೆ ಲಕ್ಷ ರೂನಿಂದ ಮೂರು ಲಕ್ಷ ರೂವರೆಗೆ ಸಹಾಯಧನ ಸಿಗಲಿದೆ ಎಂದರು.

ಕೃಷಿ ಹೊಂಡ ನಿರ್ಮಾಣ ರೈತರಿಗೆ ವರದಾನ. ಕೆಆರ್‌ಎಸ್ ಅಣೆಕಟ್ಟೆ ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡರೆ ಬೆಳೆ ಬೆಳೆಯಲು ಅನುಕೂಲವಾಗಲಿದೆ. 104 ತಾಲೂಕಿಗಷ್ಟೇ ಸೀಮಿತವಾಗಿದ್ದ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ. ನಮ್ಮ ಜಿಲ್ಲೆಯ ಜನರು ಇದನ್ನು ಬಳಸಿಕೊಳ್ಳಿ. ಅರ್ಜಿ ಹಾಕಿದ ಎಲ್ಲರಿಗೂ ಅವಕಾಶ ಕಲ್ಲಿಸಲಾಗುವುದು. ಹೊಸದಾಗಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಡಾ.ಮನ್‌ಮೋಹನ್‌ಸಿಂಗ್ ಅವರು ಪ್ರಥಮ ಬಾರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿದರು. ದೇಶದ ಯಾವುದೇ ಪ್ರಜೆಯೂ ಹಸಿವಿನಿಂದ ಬಳಲಬಾರದೆಂದು ಆಹಾರ ಸುರಕ್ಷತಾ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದರು. ರಾಜ್ಯ ಸರ್ಕಾರ ಬಡವರು, ಹಿಂದುಳಿದ ಹಾಗೂ ಮಹಿಳೆಯರ ಜೀವನ ಸುಧಾರಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಇಂತಹ ಯೋಜನೆಯನ್ನು ಈ ಹಿಂದೆ ಯಾವುದೇ ಸರ್ಕಾರ ಜಾರಿಗೆ ತಂದಿಲ್ಲ. ಪಂಚ ಗ್ಯಾರಂಟಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತರುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಜಿಲ್ಲೆಯ ಪ್ರತಿ ತಾಲೂಕಿಗೆ ಒಂದು ವರ್ಷಕ್ಕೆ ರೂ 230 ಕೋಟಿ ರೂ ಹಾಗೂ ಒಟ್ಟಾರೆ ಜಿಲ್ಲೆಗೆ 1,610 ಕೋಟಿ ರೂ ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ ಯಾವುದೇ ಮದ್ಯವರ್ತಿಗಳಲ್ಲಿ ನೇರವಾಗಿ ಹಣ ಪೋಲಾಗದೆ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಹಲವಾರು ಅಭಿವೃದ್ಧಿ ಕೆಲಸಗಳು ಸಹ ನಿರಂತರವಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಮಂಡ್ಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ನರೇಗಾ ಆಯುಕ್ತಾಲಯದ ಜಂಟಿ ನಿರ್ದೇಶಕಿ ಲಲಿತಾರೆಡ್ಡಿ, ಬೆಲ್ಲದನಾಡು ರೈತ ಉತ್ಪಾದಕ ಕಂಪನಿ ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net