ಲಿಂಗ ಸಮಾನತೆಯಿಂದ ಸಮಗ್ರ ಅಭಿವೃದ್ಧಿ ಸಾಧ್ಯ

Integral development is possible through gender equality
ವಿಜಯಪುರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಕುರಿತ ಗೋಷ್ಠಿಯಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಮಾತನಾಡಿದರು. ಡಾ. ಸುಜಾತಾ ಕಟ್ಟಿಮನಿ, ಡಾ. ಹಾಜಿರಾ ಪರವೀನ ಇತರರಿದ್ದರು.
Published on

ವಿಜಯಪುರ: ಲಿಂಗ ಸಮಾನತೆಯಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವಿದೆ. ಅದನ್ನು ಅರಿತು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಅತ್ಯಗತ್ಯ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಹೇಳಿದರು.

ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಹಾಗೂ 14ನೇ ಅಖಿಲ ಭಾರತ ಶೈಕ್ಷಣಿಕ ಆಂದೋಲನದ ಅಡಿ ಶೈಕ್ಷಣಿಕ ಸಮ್ಮೇಳನದ ಮೂರನೇ ದಿನ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

ಶಿಕ್ಷಣ ನಮ್ಮಲ್ಲಿ ಅರಿವು, ಕೌಶಲ್ಯ ಹಾಗೂ ಜ್ಞಾನವನ್ನು ಬೆಳೆಸುವ ಸಾಧನ. ಆರ್ಥಿಕವಾಗಿ, ಸಾಮಾಜಿಕವಾಗಿ ನಮ್ಮನ್ನು ಸದೃಢ ಮಾಡುವ ಶಕ್ತಿ ಅದಕ್ಕಿದೆ. ವಿಶೇಷವಾಗಿ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದ್ದು, ಸಬಲೀಕರಣವೆಂದರೆ ಜವಾಬ್ದಾರಿ ನಿರ್ವಹಿಸುವ ಕಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಿಕ್ಷಣ ಹಂತದಿಂದ ಪದವಿ ಹಂತಕ್ಕೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಕಾರಣ ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳುವ ಜತೆಗೆ ಸಮಾಜದ ವಿವಿಧ ರಂಗಗಳಲ್ಲಿ ಕಾರ್ಯಮಾಡುವ ಮೂಲಕ ಮುನ್ನೆಲೆಗೆ ಬರಬೇಕು ಎಂದು ಕರೆ ನೀಡಿದರು.

ಮಹಿಳಾ ಸಬಲೀಕರಣದ ವಿವಿಧ ವಿಷಯಗಳ ಕುರಿತು ನಡೆದ ಗೋಷ್ಠಿಯಲ್ಲಿ ಹಲೀಮಾ ಸಾದಿಯಾ, ಸಯ್ಯದಾ ಮೆಹರ ಅಪ್ಸಾನಾ ಮತ್ತು ಡಾ. ಹಾಜಿರಾ ಪರವೀನ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಸುಜಾತಾ ಕಟ್ಟಿಮನಿ ಮಾತನಾಡಿದರು.

ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ, ಆರ್.ಎ. ಪುಣೇಕರ, ಡಾ. ಸುಜಾವುದ್ದೀನ, ಪ್ರಾಚಾರ್ಯ ಡಾ. ಎಚ್.ಕೆ. ಯಡಹಳ್ಳಿ ಮತ್ತಿತರರಿದ್ದರು. ಸಂಯೋಜಕಿ ಪ್ರೊ. ವಿದ್ಯಾವತಿ ಬೆನ್ನೂರಮಠ ನಿರ್ವಹಿಸಿದರು. ಪ್ರೊ. ಸಾದಿಯಾ ಬಾನು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net